ಶಿವಮೊಗ್ಗ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕಲ್ಯಾಣ ಮಂಡಳಿಯು ನೊಂದಾಯಿತ ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳ ಸಹಾಯಧನವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು

ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


ನೊಂದಾಯಿತ ಫಲಾನುಭವಿಗಳ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಯೋಜನೆಯಡಿ ನೀಡುತ್ತಿದ್ದ ಸಹಾಯಧನದಲ್ಲಿ ಶೇ.೮೦ರಷ್ಟು ಕಡಿತಗೊಳಿಸಿರುವುದರಿಂದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಫ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.


ಸಹಾಯಧನ ಕಡಿತಗೊಳಿಸಿರುವ ಪ್ರಸ್ತುತ ಆದೇಶವನ್ನು ಸರ್ಕಾರ ರದ್ದುಪಡಿಸಿ ಕಳೆದ ವರ್ಷದಂತೆ ಯಥಾವತ್ತಾಗಿ ಜಾರಿಗೊಳಿಸಬೇಕು. ಅಪಘಾತ ಪರಿಹಾರ ಸಹಾಯ ಧನವನ್ನು ೮ಲಕ್ಷ ರೂ. ಮತ್ತು ಸಂಪೂರ್ಣ ಶಾಶ್ವತ ದುರ್ಬಲತೆಗೆ ೫ಲಕ್ಷ ರೂ. ಹಾಗೂ ಭಾಗಶಃ ದುರ್ಬಲತೆಗೆ ೩ಲಕ್ಷ ನೀಡಬೇಕು.

ಅಂತ್ಯಕ್ರಿಯೆಗೆ ೨೫ ಸಾವಿರ ರೂ. ಹಾಗೂ ಅನುಗ್ರಹ ರಾಶಿಗೆ ೧ಲಕ್ಷ ರೂ. ಸಹಾಯಧನ ನೀಡಬೇಕು. ಸಹಾಯ ಧನ ಅರ್ಜಿಯು ಮಂಜೂರಾತಿ ಆದೇಶದ ನಂತರ ನಿರ್ದಿಷ್ಟ ೧೦ ದಿನಗಳಲ್ಲಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.


ಪ್ರತಿಭಟನಾ ಧರಣಿಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್, ಬಿ. ರಾಜಾಚಾರಿ, ಬಿ.ಆರ್. ಯಲ್ಲಪ್ಪ, ಸುರೇಶ್, ಎ. ಶಶಿಕುಮಾರ್, ನೇತ್ರಾವತಿ, ಸಂಧ್ಯಾ ಎಂ. ಪವಿತ್ರಾ, ಕೆ. ರಾಜು, ಅವಿನಾಶ್, ಮುನಿಯಪ್ಪ, ಜಯಣ್ಣ, ಶಿವಕುಮಾರ್, ಶೇಖರ್, ಆನಂದ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!