ಶಿವಮೊಗ್ಗ : ಹೊಸ ಅಧ್ಯಯನ ಮತ್ತು ಪ್ರಯೋಗಗಳು ನಮ್ಮನ್ನು ಸದಾ ಪ್ರಬುದ್ಧರನ್ನಾಗಿ ಉಳಿಸುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಜಿ.ನಾರಾಯಣರಾವ್ ಅಭಿಪ್ರಾಯಪಟ್ಟರು.
ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅರ್ಥಶಾಸ್ತ್ರ ವೇದಿಕೆ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜ್ಞಾನವನ್ನು ಸ್ವೀಕಾರ ಮಾಡುವ ಮುಕ್ತ ಮನೋಭಾವ ತುಂಬಾ ಮುಖ್ಯ. ಯಾವುದೇ ಜ್ಞಾನ ವೃದ್ದಿಯ ಚಿಂತನಾ ಮಂಥನಗಳಲ್ಲಿ ಮುಕ್ತವಾಗಿ ಭಾಗವಹಿಸಿ. ಜ್ಞಾನ ತುಂಬಿದ ಕೊಡಗಳಾಗಿ ಆಗುವ ಮೂಲಕ ಕಲಿಕೆಯೆಂಬ ನಿರಂತರ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ.
ಪ್ರತಿ ಸಂದರ್ಭದಲ್ಲಿಯು ನಿಮ್ಮ ಉಪನ್ಯಾಸಕರ ಮೇಲೆ ಹೆಚ್ಚು ಅವಲಂಬಿತರಾಗಬೇಡಿ. ಉಪನ್ಯಾಸಕರು ಜ್ಞಾನದ ದೀವಿಗೆ ನೀಡಿದರೆ, ಅದನ್ನು ಬಳಸಿ ಕಲಿಕೆಯ ಸಂಪೂರ್ಣತೆಯೆಡೆಗೆ ಸಾಗುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಅಂತಹ ಸಂಪೂರ್ಣತೆ ಪ್ರಯೋಗಾಧಾರಿತ ಸ್ವಯಂ ಅಧ್ಯಯನದಿಂದ ಸಿಗಲಿದೆ.
ಕೌಟಿಲ್ಯಯನ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕಿದೆ. ರಾಜಕೀಯ ಮತ್ತು ಆಡಳಿತ ವಿಚಾರಗಳನ್ನು ಅರ್ಥಶಾಸ್ತ್ರದ ಮೂಲಕ ಮಂಡಿಸಿರುವ ಕೌಟಿಲ್ಯನ ವಿಚಾರಗಳನ್ನು ಅರಿಯಿರಿ. ನಾವು ಮಾಡುವ ಸರ್ವೆಗಳಲ್ಲಿ ಸಮಾಜಕ್ಕೆ ಪೂರಕವಾದ ವಿಚಾರಗಳನ್ನು ಒಳಗೊಂಡಿರಲಿ.
ವಿದ್ಯಾರ್ಥಿಗಳು ರಚಿಸಿದ ಸಂಶೋಧನಾ ಪ್ರಬಂಧಗಳು ವಿವಿಧ ಸಂಶೋಧನಾ ಗ್ರಂಥಗಳಲ್ಲಿ ಪ್ರಕಟಗೊಂಡು ಮುಕ್ತ ಚರ್ಚೆಯಾಗಲಿ. ಪ್ರಸ್ತುತ ಭಾರತದ ಅರ್ಥಶಾಸ್ತ್ರ ವ್ಯವಸ್ಥೆಯಲ್ಲಿನ ಬದಲಾವಣೆಗಳ ಬಗ್ಗೆ ಅರಿವು ನಿಮ್ಮದಾಗಬೇಕಿದೆ ಎಂದು ಸಲಹೆ ನೀಡಿದರು.
ಕಮಲಾ ನೆಹರು ಕಾಲೇಜು ಸಾಂಸ್ಕೃತಿಕ ಪ್ರತಿಭೆಗಳ ಶ್ರೀಮಂತಿಕೆಯನ್ನು ಹೊಂದಿದೆ. ಹೆಣ್ಣು ಮಕ್ಕಳಲ್ಲಿ ಕಲಾವಂತಿಕೆ ಸದಾ ಇರುತ್ತದೆ. ಅಂತಹ ಕಲಾವಂತಿಕೆಯ ಸೃಜನಶೀಲತೆಗೆ ಕಾಲೇಜು ನೀಡುವ ವೇದಿಕೆಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಿ ಎಂದು ಹೇಳಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮಂಜುಳಾ.ಎನ್ ಮಾತನಾಡಿ, ವಿದ್ಯಾರ್ಥಿನಿಯರಲ್ಲಿ ಶೈಕ್ಷಣಿಕ ಭೇಟಿ, ಮಾನವ ಸಂಪನ್ಮೂಲ ನಿರ್ವಹಣೆ, ವೃತ್ತಿ ಶಿಕ್ಷಣ ಕೌಶಲ್ಯತೆ ಕುರಿತಾಗಿ ಅರ್ಥಶಾಸ್ತ್ರ ವೇದಿಕೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಪ್ರಾಂಶುಪಾಲರಾದ ಡಾ.ಹೆಚ್.ಎಸ್.ನಾಗಭೂಷಣ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಆರಡಿ ಮಲ್ಲಯ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ಪಂದನಾ ಪ್ರಾರ್ಥಿಸಿ, ದಿವ್ಯ.ಎಂ ಸ್ವಾಗತಿಸಿ, ಚಂದ್ರಕಲಾ ನಿರೂಪಿಸಿದರು.