ರಾಜ್ಯೋತ್ಸವ ವಿಶೇಷ-೧
ತುಂಗಾತರಂಗ ವಿಶೇಷ ಬರಹ
ಶಿವಮೊಗ್ಗ, ನ.01:
ಸರ್ಕಾರಿ ಕೆಲಸವೇ ದೇವರು, ಪ್ರಚಾರವೆಂದರೆ ಮಾರುದ್ದ ದೂರ ಹೋಗುವ ಕೆಲವೇ ಕೆಲವು ಅಧಿಕಾರಿಗಳ ನಡುವೆ ಶಿವಮೊಗ್ಗ ನಗರದ ಪ್ರಮುಖ ಅಧಿಕಾರಿಯೊಬ್ಬರು ಕಾಣಿಸಿಕೊಳ್ಳುತ್ತಾರೆ ಎಂಬುದಕ್ಕೆ ಬಹು ಮುಖ್ಯ ಘಟನೆಯೊಂದನ್ನು ನ. 1 ರಂದು “ತುಂಗಾತರಂಗ” ಕಣ್ಣಾರೆ ಕಂಡಿತು.
ನಿತ್ಯದ ಸರ್ಕಾರಿ ಸಮಯದ ಅವಧಿಯ ನಂತರವೂ ಇದ್ದು ಒಂದಿಷ್ಟು ಜನ ಉಪಯೋಗಿ ಕಾರ್ಯಗಳನ್ನು ಮಾಡಬೇಕು.
ಜನರ ಒಳಿತಿನ ಜೊತೆ ಅಭಿವೃದ್ಧಿಯ ಬಗ್ಗೆ ಚಿಂತನೆ ಹೊತ್ತಂತಹ ಕೆಲವೇ ಕೆಲವು ಅಧಿಕಾರಿಗಳಲ್ಲಿ ಇವರೂ ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ.
ಕನ್ನಡ ರಾಜ್ಯೋತ್ಸವದ ಇಂದು ಮಧ್ಯಾಹ್ನ 12ರ ಹೊತ್ತಿಗೆ ಇಡೀ ಶಿವಮೊಗ್ಗ ನಗರದ ಎಲ್ಲಾ ಇಲಾಖೆಯ ಕಛೇರಿಗಳು ನಿಶ್ಯಬ್ದವಾಗಿದ್ದವು. ತುಂಗಾತರಂಗ ಹೋದ ಇಲಾಖೆಯ ಯಾವುದೇ ಕಚೇರಿಯ ಬಾಗಿಲು ತೆರೆದಿರಲಿಲ್ಲ. ಆದರೆ, ಅಲ್ಲಿನ ಮುಖ್ಯಸ್ಥರು ಕರ್ತವ್ಯದಲ್ಲಿ ನಿರತವಾಗಿದ್ದು ವಿಶೇಷ. ತಮ್ಮ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ದೀಪಗಳ ಅಂದರೆ ಬೀದಿ ದೀಪಗಳ ಒಟ್ಟಾರೆ ವೆಚ್ಚ ಯಾಕೆ ಹೆಚ್ಚಾಗಿ ಬಗ್ಗೆ ಬರುತ್ತಿದೆ. ಬಳಸಿಕೊಳ್ಳದ ಅಂದರೆ ಸೋಲಾರ್ ಅಳವಡಿಸಿರುವ ಬೀದಿದೀಪಗಳಿಗೂ ವಿದ್ಯುತ್ ಬಿಲ್ ಬರುತ್ತಿದೆಯೇ? ಬೀದಿ ದೀಪ ಇಲ್ಲದ ಕಡೆ ಈ ಶುಲ್ಕ ಪಾವತಿಯಾಗುತ್ತಿದೆಯೇ ಎಂಬ ಲೆಕ್ಕಾಚಾರ ಹಿಡಿದು ಪಾಲಿಕೆಯ ವಿದ್ಯುತ್ ವಿಭಾಗದ ಅಧಿಕಾರಿಗಳು ಹಾಗೂ ನೌಕರರೊಂದಿಗೆ ಚರ್ಚಿಸುತ್ತಿದ್ದರು.
ತುಂಗಾತರಂಗ ಅನುಮತಿ ಮೇರೆಗೆ ಕಚೇರಿಯ ಒಳಗೆ ಹೋದ ಸಂದರ್ಭದಲ್ಲಿ ಬಂದ ಆ ಅಧಿಕಾರಿಯ ದೂರವಾಣಿ ಕರೆಯಲ್ಲಿ ಅವರು ಅವರ ಪುತ್ರಿಯ ಜೊತೆ ಚರ್ಚಿಸುತ್ತಿದ್ದರು. ಕೌಟುಂಬಿಕ ಜಗತ್ತಿನ ಒಬ್ಬರಿಗೆ ಕಳೆದ ಎರಡು ದಿನಗಳ ಹಿಂದೆ ಅಪಘಾತವಾಗಿದ್ದು, ಕೈ ಮೂಳೆ ಮುರಿದಿತ್ತು. ಅದರ ನಡುವೆಯೂ ಸ್ವಂತ ಊರಿಗೆ ಹೋಗದ ಈ ಅಧಿಕಾರಿ ಇಲ್ಲಿಯೇ ಕುಳಿತು ಆರೋಗ್ಯ ವಿಚಾರಿಸಿದ್ದರು.
ನಿಜಕ್ಕೂ ಆಶ್ಚರ್ಯ ಹಾಗೂ ವಿಶೇಷ ಎನಿಸುವ ಕೆಲವೇ ಕೆಲವು ಅಧಿಕಾರಿಗಳಲ್ಲಿ ಇವರೂ ಒಬ್ಬರಾಗಿ ನಿಂತುಬಿಡುತ್ತಾರೆ.
ಕುಟುಂಬ ಯಾವತ್ತೂ ತಮ್ಮ ಅಧಿಕಾರದ ದುರ್ಬಳಕೆಯ ಮೂಲವಾಗಬಾರದು. ಮೊದಲು ಸರ್ಕಾರಿ ಕೆಲಸ ಎಂದು ನಗುತ್ತಲೇ ತುಂಗಾತರಂಗ ಪ್ರಶ್ನೆಗೆ ಉತ್ತರಿಸಿದ ಅವರು ಇವತ್ತು ಹೋಗಬಹುದಿತ್ತು. ಆದರೆ ಭಾನುವಾರ ಹೋಗುತ್ತೇನೆ. ಈಗ ವಿದ್ಯುತ್ ಬಿಲ್ ಉಳಿಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಮೊದಲೇ ನಿಗದಿಯಾಗಿದ್ದ ರಜೆ ದಿನದ ಈ ಅವಧಿಯ ಯಾವುದೇ ಕಿರಿಕಿರಿ ಇಲ್ಲದ ಸನ್ನಿವೇಶದ ಸಮಯವನ್ನು ಬಳಸಿಕೊಳ್ಳಲು ನಿಗದಿಪಡಿಸಲಾಗಿತ್ತು ಹಾಗಾಗಿ ಈ ಕರ್ತವ್ಯದಲ್ಲಿ ತೊಡಗಿದ್ದೇವೆ. ಮೊದಲು ಕೆಲಸ ಎಂದು ಹೆಚ್ಚು ಮಾತನಾಡದೆ ನಗುತ್ತಲೇ ಉತ್ತರಿಸಿದ್ದು ವಿಶೇಷವೇ ಹೌದು.
ಪ್ರಚಾರ ಎಂದರೆ ದೂರ ಸರಿಯುವ ಅವರು ಇಲಾಖೆ ಹಾಗೂ ತಮ್ಮ ಹೆಸರನ್ನು ಹಾಕದಂತೆ ಆತ್ಮೀಯ ಭಾಷೆಯಲ್ಲೇ ಕೋರಿದರು. ಸದ್ದಿಲ್ಲವೇ ಸರ್ಕಾರಿ ಸೇವೆಯನ್ನು ಪ್ರಶಂಸನೀಯವಾಗಿ ಮಾಡುತ್ತಿರುವುದನ್ನು ಕಣ್ಣಾರೆ ಕಂಡ ಅನುಭವದ ನಾಲ್ಕು ಸಾಲುಗಳು ಇಲ್ಲಿವೆ. ಇಂತಹ ಅಧಿಕಾರಿ ಶಿವಮೊಗ್ಗ ಪಾಲಿಗೆ ಸಿಕ್ಕಿರುವುದು ಪುಣ್ಯವೇ ಹೌದು.