ಶಿವಮೊಗ್ಗ: ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಬೀದಿ ಬದಿ ವ್ಯಾಪಾರಿಗಳ ವಿಭಾಗದಿಂದ ಇಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ನಗರದ ಜಯನಗರ, ಬಸವನಗುಡಿ, ನೆಹರು ಸ್ಟೇಡಿಯಂ, ರವೀಂದ್ರನಗರ, ಗಾಂಧಿನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ವಯೋವೃದ್ಧರು, ಮಕ್ಕಳು ಓಡಾಡುವುದೇ ಕಷ್ಟವಾಗಿದೆ. ಅದರಲ್ಲೂ ಬೈಕ್ ಸವಾರರನ್ನು ಈ ನಾಯಿಗಳು ಅಟ್ಟಿಸಿಕೊಂಡು ಹೋಗಿ ಭಯ ಹುಟ್ಟಿಸುವುದಲ್ಲದೆ ಕಚ್ಚುತ್ತವೆ ಕೂಡ. ಭಯಗೊಂಡ ಅನೇಕ ಬೈಕ್ ಸವಾರರು ಅಪಘಾತಕ್ಕೂ ಒಳಗಾಗಿದ್ದಾರೆ ಎಂದು ದೂರಿದ್ದಾರೆ.
ಮಹಾನಗರ ಪಾಲಿಕೆಯ ಅಧಿಕಾರಿಗಳು ಬೀದಿನಾಯಿಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಪ್ರತಿ ವರ್ಷ ಪಾಲಿಕೆ ವತಿಯಿಂದಲೇ ನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ
ಈ ಚಿಕಿತ್ಸೆ ಮಾಡದೆ ಇರುವುದರಿಂದ ಬೀದಿ ನಾಯಿಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಮಕ್ಕಳು ಸೇರಿದಂತೆ ಬೀದಿನಾಯಿಗಳು ಕಚ್ಚಿವೆ. ಆದ್ದರಿಂದ ಪಾಲಿಕೆ ಅಧಿಕಾರಿಗಳು ನಾಯಿಗಳ ಹಾವಳಿ ನಿಯಂತ್ರಿಸಿ ಸಾರ್ವಜನಿಕರ ಪ್ರಾಣ ರಕ್ಷಿಸಬೇಕು ಎಂದು ಮನವಿಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಮಣಿ ಗೌಂಡರ್, ಜಿಲ್ಲಾಧ್ಯಕ್ಷ ಎಂ. ದಿನೇಶ್, ಜಿ.ಮಂಜುನಾಥ್, ಮಹ್ಮದ್ ಮೌಸೀನ್ ಮುಂತಾದವರಿದ್ದರು.