ಲಕ್ನೋ,ಡಿ.03 :
ಮರಳು ತುಂಬಿದ್ದ ಟ್ರಕ್ ನಿಂತಿದ್ದ ಮಹಿಂದ್ರಾ ಸ್ಕಾರ್ಪಿಯೊ ಮೇಲೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 8 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ರಾತ್ರಿ ಸಂಭವಿಸಿದೆ.
ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದವರು ಮಸಣ ಸೇರಿದ್ದಾರೆ.
ದೇವಿಗಂಜ್ ನಲ್ಲಿ ತಮ್ಮ ಸಂಬಂಧಿಕರ ಮದುವೆ ಸಮಾರಂಭ ಮುಗಿಸಿ ಶಹಜಾದ್ ಪುರಕ್ಕೆ ಹಿಂತಿರುಗುತ್ತಿದ್ದಾಗ ಕಾಡಾಧಾಮ್ ಪ್ರದೇಶದಲ್ಲಿ ಟ್ರಕ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದವರ ದೇಹಗಳು ಅಪ್ಪಚ್ಚಿಯಾಗಿದ್ದು, ಗ್ಯಾಸ್ ಕಟರ್ ಬಳಸಿ ದೇಹಗಳನ್ನು ಹೊರತೆಗೆಯಬೇಕಾಯಿತು ಎಂದು ಎಸ್ಪಿ ಅಭಿನಂದನ್ ತಿಳಿಸಿದ್ದಾರೆ.
ಯುವತಿಯರಿಬ್ಬರು ಪಾರು:
ಕಾರಿನಲ್ಲಿದ ಇಬ್ಬರು ಯುವತಿಯರು ಕಿಟಕಿ ಗಾಜು ಹೊಡೆದು ಹೊರಬರುವಲ್ಲಿ ಯಶಸ್ವಿಯಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತಕ್ಕೆ ಕಾರಣನಾದ ಟ್ರಕ್ ಚಾಲಕ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಸಿಎಂ ಸಾಂತ್ವಾನ:
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸತ್ತವರ ಕುಟುಂಬಕ್ಕೆ ಆಗತ್ಯ ನೆರವು ನೀಡುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.