ಶಿವಮೊಗ್ಗ,ಅ.23:
ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ರಾಶಿಗಟ್ಟಲೆ ಬೂದುಗುಂಬಳ, ಬಾಳೆಕಂದು, ಹೂವು ಮಾರುಕಟ್ಟೆಗೆ ಬಂದಿವೆ.
ಆಯುಧ ಪೂಜಾ ಹಿನ್ನಲೆಯಲ್ಲಿ ನಗರದಲ್ಲಿ ಸಡಗರ ಮತ್ತು ಸಂಭ್ರಮದಿಂದ ನಡೆದಿದೆ. ಸರ್ಕಾರಿ ವಾಹನಗಳು, ಖಾಸಗಿ ವಾಹನಗಳಿಗೆ ಪೂಜೆ ಸಲ್ಲಿಸಿ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತಿದೆ.
ಖಾಸಗಿ ಬಸ್ ಗಳು, ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಸರ್ಕಾರಿ ಇಲಾಖಾ ವಾಹನಗಳಿಗೆ ಪೂಜೆ ಸಲ್ಲಿಸಿ ವಾಹನಗಳಿಗೆ ಹೂವಿನ ಅಲಂಕಾರ ನೆರವೇರಿಸಲಾಗುತ್ತಿದೆ. ನಗರದ 9 ಪೊಲೀಸ್ ಠಾಣೆಗಳಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಲಾಗಿದೆ. ಮೊದಲು ದೇವಸ್ಥಾನದಲ್ಲಿ ಪೂಜೆ ಸಲ್ಲಿ ನಂತರ ಠಾಣೆಗೆ ತಂದು ಪೂಜೆ ಸಲ್ಲಿಸಲಾಯಿತು..
ಕೆಲ ಠಾಣೆಗಳಲ್ಲಿ ಬಂದೂಕು ಮತ್ತು ರಿವಾಲ್ವರ್ ಗಳಿಗೆ ಪೂಜೆ ಸಲ್ಲಿಸಲಾಗಿದೆ. ಇಲಾಖೆ ವಾಹನಗಳಿಗೆ ಕುಂಬಳಕಾಯಿಯನ್ನ ಒಡೆದು ಪೂಜೆ ನೆರವೇರಿಸಲಾಗಿದೆ. ತುಂಗನಗರ, ದೊಡ್ಡಪೇಟೆ, ಶಿವಮೊಗ್ಗ ಗ್ರಾಮಾಂತರ, ಮಹಿಳಾ ಪೊಲೀಸ್ ಠಾಣೆ, ಜಯನಗರ, ವಿನೋಬ ನಗರ, ಕೋಟೆ ಎರಡು ಸಂಚಾರಿ ಇಲಾಖೆಗಳಲ್ಲಿ ಆಯುಧ ಪೂಜೆಯನ್ನ ನೆರವೇರಿಸಲಾಗಿದೆ.
ನರದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯನ್ನ ಪ್ರತಿಷ್ಠಾಪಿಸಿ ಪೂಜೆ ನಡೆಸಲಾಗಿದೆ. ಈ ಪೂಜೆಯಲ್ಲಿ ಎಸ್ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್, ಪಿಐ ಸಂತೋಷ್ ಕುಮಾರ್ ಸಿಬ್ಬಂದಿಗಳು ಭಾಗಿಯಾಗಿದ್ದರು.
ನಗರದ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಗಾಂಧಿಬಜಾರ್ ನಲ್ಲಿ ಜನಸಂದಣಿ ಹೆಚ್ಚಾಗಿತ್ತು. ಶಿವಪ್ಪ ನಾಯಕ ವೃತ್ತ, ಬಿಹೆಚ್ ರಸ್ತೆ, ನೆಹರು ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಲಕ್ಷ್ಮಿ ಟಾಕೀಸ್, ಪೊಲೀಸ್ ಚೌಕಿ, ಗೋಪಾಳ, ವಿನೋಬನಗರ, ಸಾಗರ ರಸ್ತೆ ಸೇರಿದಂತೆ ವಿವಿಧಡೆ ಹೂವು, ಹಣ್ಣು, ಬಾಳೆಕಂದು ಮತ್ತಿತರ ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿ ನಡೆದಿತ್ತು.
ಆಯುಧ ಪೂಜೆಯಂದು ವಾಹನ, ಯಂತ್ರಗಳು, ಮಾರಾಟ ಮಳಿಗೆಗಳಿಗೆ ಪೂಜೆ ಸಲ್ಲಿಸಲು ಬೂದುಗುಂಬಳ ಮತ್ತು ನಿಂಬೆಹಣ್ಣು ಹೆಚ್ಚಾಗಿ ಬಳಸಲಾಗುತ್ತದೆ. ಹೀಗಾಗಿ ಇವುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹಬ್ಬಕ್ಕೆ ಎರಡು ದಿನ ಮುಂಚಿತವಾಗಿಯೇ ಲೋಡ್‌ಗಟ್ಟಲೆ ಬೂದಗುಂಬಳ ಮತ್ತು ನಿಂಬೆಹಣ್ಣು ಮಾರುಕಟ್ಟೆಗೆ ಬಂದಿದ್ದು, ಖರೀದಿ ಪ್ರಕ್ರಿಯೆಯು ಬಲು ಜೋರಾಗಿ ಸಾಗಿದೆ.
ಆಯುಧ ಪೂಜೆಯಂದು ಆಯುಧಗಳಿಗೆ ಮಾತ್ರವಲ್ಲದೆ, ವಾಹನಗಳಿಗೆ, ಯಂತ್ರೋಪಕರಣಗಳಿಗೆ, ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸಿರುವ ಸಂಪ್ರದಾಯ ಇರುವುದರಿಂದ ಜನರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಅಂಗಡಿಗಳಲ್ಲಿ, ಕಾರ್ಖಾನೆಗಳಲ್ಲಿ ಮಾಲೀಕರು ಹಾಗೂ ಸಿಬ್ಬಂದಿ ಬೆಳಿಗ್ಗೆಯಿಂದಲೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.
ಜನಸಂದಣಿ: ಹಬ್ಬದ ಕಾರಣಕ್ಕೆ ಜನಸಂದಣಿ ಹೆಚ್ಚಿತ್ತು. ಬೆಳಿಗ್ಗೆಯಿಂದಲೇ ಜನರು ಪೇಟೆಗೆ ಬಂದು ಹಬ್ಬದ ಆಚರಣೆಗೆ ಬೇಕಾದ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದರು. ಪೂಜೆಗಾಗಿ ಹೂವು, ನಿಂಬೆ ಹಣ್ಣು, ಬೂದು ಕುಂಬಳಕಾಯಿ, ಬಾಳೆ ಕಂದು, ಮಾವಿನ ಸೊಪ್ಪು, ಹಣ್ಣು ಹಂಪಲು, ಅರಿಸಿನ, ಕುಂಕುಮ ಸೇರಿದಂತೆ ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
ವ್ಯಾಪಾರಿಗಳು ರಸ್ತೆ ಬದಿಯಲ್ಲಿ ತಳ್ಳುಗಾಡಿಗಳಲ್ಲಿ ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು, ನಿಂಬೆ ಹಣ್ಣುಗಳನ್ನು ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು. ವಾಹನಗಳು, ಅಂಗಡಿಗಳನ್ನು ಅಲಂಕರಿಸಲು ಬಳಸುವ ಕೃತಕ ಹಾರಗಳು, ಇತರೆ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಿತ್ತು.
ಕುಂಬಳಕಾಯಿಗೆ ಬೇಡಿಕೆ ಕಡಿಮೆ: ವ್ಯಾಪಾರಿಗಳು ಬೂದುಕುಂಬಳಕಾಯಿ ರಾಶಿ ಹಾಕಿದ್ದರು. 30 ರೂ. ನಿಂದ 300 ರೂ. ವರೆಗೆ ಬೂದು ಕುಂಬಳಕಾಯಿ ಬೆಲೆ ಇತ್ತು.
ನಿಂಬೆಹಣ್ಣಿಗೆ ಗಾತ್ರಕ್ಕೆ ಅನುಗುಣವಾಗಿ 4 ರೂ.ನಿಂದ 10 ರೂ. ರವರೆಗೆ ಬೆಲೆ ಇತ್ತು. ಬಾಳೆಕಂದು, ಕಬ್ಬಿನ ಪೈರು, ಮಾವಿನಸೊಪ್ಪು ವ್ಯಾಪಾರ ಭರ್ಜರಿಯಾಗಿ ಸಾಗಿದೆ.
ಹಬ್ಬವು ತರಕಾರಿ, ಹಣ್ಣುಗಳ ಧಾರಣೆ ಮೇಲೆ ಪ್ರಭಾವ ಬೀರಿಲ್ಲ. ಏಲಕ್ಕಿ ಬಾಳೆಹಣ್ಣಿಗೆ ಕೆಜಿಗೆ 120ರೂ., ಪಚ್ಚೆ ಬಾಳೆ ಹಣ್ಣಿಗೆ 50 ರೂ. ಇತ್ತು.
ಹಬ್ಬದ ಕಾರಣ ಹೂವುಗಳು ದುಬಾರಿಯಾಗಿವೆ. ಬೆಲೆ ಹೆಚ್ಚಾಗಿದ್ದರೂ ಜನರು ಹೂವಿನ ಖರೀದಿಯಲ್ಲಿ ತೊಡಗಿದ್ದರು. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಚೆಂಡು ಹೂ ಸೇವಂತಿಗೆ ಹೂವುಗಳನ್ನು ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು. ಸೇವಂತಿಗೆಗೆ 80ರಿಂದ 100 ರೂ., ಮಲ್ಲಿಗೆ ಹೂವು ಮಾರೊಂದಕ್ಕೆ 100ರಿಂದ 150 ರೂ., ಚೆಂಡು ಹೂವು ಒಂದು ಮಾರಿಗೆ 20ರಿಂದ 30 ರೂ. ಇತ್ತು. ಚಂಡು ಹೂ ಮಾರೊಂದಕ್ಕೆ 40 ರಿಂದ 50 ರೂ. ಇತ್ತು.
ವಾಹನ ಖರೀದಿ :
ನವರಾತ್ರಿ ಸಮಯದಲ್ಲಿ ಆಯುಧಪೂಜೆ ವಿಜಯದಶಮಿ ದಿನ ನೋಡಿ ಜನರು ವಾಹನ ಖರೀದಿಸುತ್ತಾರೆ. ಆಯುಧಪೂಜೆ ಅಂಗವಾಗಿ ಬಹುತೇಕ ಶೋರೂಂಗಳು ರಜಾ ಇರುವುದರಿಂದ ಭಾನುವಾರವೇ ಹಲವರು ಹೊಸ ವಾಹನದ ಕೀ ಪಡೆದುಕೊಂಡರು. ನಗರದ ದ್ವಿಚಕ್ರವಾಹನಗಳ ಮಳಿಗೆಗಳ ಮುಂದೆ ಹೆಚ್ಚು ಗ್ರಾಹಕರು ಇದ್ದರು. ಗೃಹಪಯೋಗಿ ಮಾರಾಟ ಮಳಿಗೆಗಳಲ್ಲೂ ಸಾಕಷ್ಟು ಗ್ರಾಹಕರು ಕಂಡುಬಂದರು. ಹಬ್ಬದ ಹಿನ್ನೆಲೆಯಲ್ಲಿ ಕೆಎಸ್ ಆರ್ಟಿಸಿ ಹಾಗೂ ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಕರ ಘಟನೆ ಕಂಡುಬಂದಿತು.