ಶಿವಮೊಗ್ಗ, ಅ.21:
ದೇಶದೆಲ್ಲೆಡೆ ಆಂತರಿಕ ಭದ್ರತೆ ಕಾಯ್ದುಕೊಳ್ಳುವ ಜೊತೆಗೆ ದೇಶದ ಹಾಗೂ ಸಾರ್ವಜನಿಕರ ರಕ್ಷಣೆಗೆ ಸದಾ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ಕಾರ್ಯ ಅತ್ಯಂತ ಶ್ಲಾಘನೀಯ. ಸಾರ್ವಜನಿಕರ ಜೀವ ಉಳಿಸಲು ತಮ್ಮ ಜೀವವನ್ನು ತ್ಯಾಗ ಮಾಡಿದ ಪೊಲೀಸರಿಗೆ ನಮನಗಳು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಇಂದಿಲ್ಲಿ ತಿಳಿಸಿದರು.
ಅವರಿಂದು ಬೆಳಗ್ಗೆ ಸಶಸ್ತ್ರ ಪೊಲೀಸ್ ಕವಾಯಿತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುತಾತ್ಮ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ನಮನ ಸಲ್ಲಿಸಿ ಮಾತನಾಡುತ್ತಿದ್ದರು.
ಯಾವುದೇ ಘಟನೆ ಆಗಲಿ ಮೊದಲು ಅದಕ್ಕೆ ಪೊಲೀಸರೇ ಉತ್ತರಿಸಬೇಕು. ಎಷ್ಟೋ ಬಾರಿ ಅಲ್ಲಿಯ ಸ್ಥಳೀಯ ಪೊಲೀಸರಿಗೆ ಸಿಗದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತದೆ. ಹಾಗಾಗಿ ಸದಾ ಎಲ್ಲಾ ಬಗೆಯ ಸಮಸ್ಯೆಗಳಿಗೆ ಸ್ಪಂದಿಸುವ ಪೊಲೀಸರ ಕರ್ತವ್ಯ ಅತ್ಯಂತ ಮಹತ್ವದ್ದು.ಅವರಿಂದಲೆರ ನಮ್ಮ ಮತ್ತು ಸಾರ್ವಜನಿಕರ ಪ್ರಾಣ, ಆಸ್ತಿ ಉಳಿಯಲು ಕಾರಣ ಎಂದು ಹೇಳಿದರು.
ಶಿವಮೊಗ್ಗ ನಗರದ ಕಳೆದ ಎರಡು ವರ್ಷದ ಘಟನೆಗಳನ್ನು ಉದಾಹರಿಸಿ ಬಹು ಕಟ್ಟುನಿಟ್ಟಾಗಿ ಪೊಲೀಸರು ಕರ್ತವ್ಯ ಮಾಡಿದ್ದಾರೆ. ಅವರಿಂದ ಬಹಳಷ್ಟು ಜನರ ಜೀವ ಹಾಗೂ ಅವರ ಮತ್ತು ಸಾರ್ವಜನಿಕ ಸ್ವತ್ತು ಉಳಿದಿದೆ ಹಾಗಾಗಿ ಅವರಿಗೆ ಅಭಿನಂದನೆಗಳು ಎಂದರು.
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಮಾತನಾಡುತ್ತಾ ಕಳೆದ 1951ರ ಅಕ್ಟೋಬರ್ 21ರಂದು ಡಿವೈಎಸ್ಪಿ ಕರೆಣ್ ಸಿಂಗ್ ನೇತೃತ್ವದ ತಂಡ ಚೀನಾ ಸೈನಿಕರ ಕುತಂತ್ರಕ್ಕೆ ಬಲಿಯಾದ ದಿನವನ್ನು ಮಾಡಿಸುವ ಉದ್ದೇಶದಿಂದ ಆರಂಭಿಸಲಾದ ಪೊಲೀಸ್ ಹುತಾತ್ಮರ ದಿನಾಚರಣೆ ಅತ್ಯಂತ ಮಹತ್ವಪೂರ್ಣವಾದದ್ದು ಎಂದರು.
ಈ ವರ್ಷ ದೇಶದಲ್ಲಿ 189 ಹಾಗೂ ರಾಜ್ಯದಲ್ಲಿ 16 ಮಂದಿ ಪೊಲೀಸರು ಕರ್ತವ್ಯದಲ್ಲಿ ಪ್ರಾಣ ನೀಡಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಹೆಸರು ಹೇಳುವ ಮೂಲಕ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಡಿ ಸಿ ಎಫ್ ಶಿವಶಂಕರ್ ಅವರು ಮಾತನಾಡುತ್ತಾ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಕೈಗೊಳ್ಳುವ ಕಾರ್ಯಗಳು ಅತ್ಯಂತ ಶ್ಲಾಘನೀಯ. ನಾವು ಸಹ ಅವರ ಕರ್ತವ್ಯವನ್ನು ಸ್ಮರಿಸುವ ಜೊತೆಗೆ ಅವರ ಕಾನೂನು ಪಾಲನೆಗೆ ಸಹಕರಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಮಾತನಾಡುತ್ತಾ ದೇಶಕ್ಕಾಗಿ, ನಮಗಾಗಿ ಹಬ್ಬ ಹರಿದಿನ ಯಾವುದನ್ನೂ ಯೋಚಿಸದೆ ನಿರಂತರವಾಗಿ ರಕ್ಷಣೆಗೆ ನಿಂತಿರುವ ಪೊಲೀಸರನ್ನು ನಾವು ಗೌರವಿಸಬೇಕು. ಅವರ ಕಷ್ಟ ನಷ್ಟಗಳನ್ನು ಅರಿತುಕೊಂಡು ಅವರ ಬದುಕನ್ನು ಉಜ್ವಲಗೊಳಿಸಬೇಕು ಎಂದು ಪ್ರಾಣ ನೀಡಿದ ಹುತಾತ್ಮ ಪೊಲೀಸರಿಗೆ ನಮಿಸಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್ ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರು ಮತ್ತು ವಿಶೇಷ ಆಹ್ವಾನಿತರು ಪಾಲ್ಗೊಂಡಿದ್ದರು.
ದೊಡ್ಡಪೇಟೆ ಠಾಣೆಯ ಎಂ.ಎಸ್. ಪ್ರಮೋದ ಅವರು ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ನಿರೂಪಿಸಿದರು. ಗುಂಡು ಸಿಡಿಸುವ ಮೂಲಕ ಶಿವಮೊಗ್ಗ ಪೊಲೀಸ್ ಅಧಿಕಾರಿಗಳು ಹುತಾತ್ಮ ಪೊಲೀಸರಿಗೆ ನಮಿಸಿದರು.