ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ದಸರಾ ಅಂಗವಾಗಿ ಹಮ್ಮಿಕೊಂಡಿರುವ ಆಹಾರ ದಸರಾ ಸಮಿತಿ ವತಿಯಿಂದ ಅ.೧೬ ಮತ್ತು ೧೭ರಂದು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಹಾರ ದಸರಾ ಸಮಿತಿಯ ಅಧ್ಯಕ್ಷೆ ಆಶಾ ಚಂದ್ರಪ್ಪ ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಅ.೧೬ರಂದು ಬೆಳಿಗ್ಗೆ ೧೧ ಗಂಟೆಗೆ ಶಿವಪ್ಪ ನಾಯಕ ವೃತ್ತದಲ್ಲಿ ಸಾರ್ವಜನಿಕರಿಗೆ ೨ ನಿಮಿಷದಲ್ಲಿ ಕೊಟ್ಟೆ ಕಡುಬು,
ಅವರೆಕಾಳು ಸಾಂಬಾರ್ ತಿನ್ನುವ ಸ್ಪರ್ಧೆಯನ್ನು ಪುರುಷರು ಮತ್ತು ಮಹಿಳೆಯರಿಗೆ ಹಾಗೂ ಹಣ್ಣು ತಿನ್ನುವ ಸ್ಪರ್ಧೆಯನ್ನು ಮಹಿಳಾ ಮತ್ತು ಪುರುಷ ಪೊಲೀಸರಿಗೆ ಆಯೋಜಿಸಲಾಗಿದೆ ಎಂದರು.
೧೭ರಂದು ಮಧ್ಯಾಹ್ನ ೧೨-೩೦ಕ್ಕೆ ಶಿವಪ್ಪ ನಾಯಕ ವೃತ್ತದಲ್ಲಿ ಅಡುಗೆ ಮಾಡುವ ಸ್ಪರ್ಧೆ(ಅಪ್ಪ-ಮಗಳು-ಗೋಧಿರವೆ ಮತ್ತು ಫೇಣಿ ರವೆ ಉಪಯೋಗಿಸಿ ತಯಾರಿಸುವ ಖಾದ್ಯಗಳು) ಆಯೋಜಿಸಿದ್ದು, ಸ್ಪರ್ಧಿಗಳಿಗೆ ಗ್ಯಾಸ್ ಹಾಗೂ ಗ್ಯಾಸ್ ಸ್ಟವ್ ನೀಡಲಾಗುವುದು. ಇತರೆ ಪದಾರ್ಥಗಳನ್ನು ಸ್ಪರ್ಧಿಗಳೇ ತರಬೇಕಾಗುತ್ತದೆ ಎಂದರು.
ಅ.೧೬ರಿಂದ ೨೪ರ ವರೆಗೆ ಫ್ರೀಡಂ ಪಾರ್ಕ್ನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ೨೫ ಸ್ಟಾಲ್ಗಳಲ್ಲಿ ವಿವಿಧ ರೀತಿಯ ಸಾಂಪ್ರದಾಯಿಕ ವಿಶಿಷ್ಟ ಅಡುಗೆ ತಯಾರಿಕೆ ಹಾಗೂ ತಿನಿಸುಗಳ ಅಂಗಳ ಇದ್ದು,
ಸ್ಟಾಲ್ಗಳನ್ನ ಉಚಿತವಾಗಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಎಸ್.ಜ್ಞಾನೇಶ್ವರ್ ಶಂಕರ್ ಗನ್ನಿ, ಪ್ರಭು, ಆರತಿ ಆ.ಮಾ. ಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.