ಶಿವಮೊಗ್ಗ : ಅಕ್ಟೋಬರ್ ೦೩ :

ಶಿವಮೊಗ್ಗ ನಗರದ ಹೊರವಲಯ ರಾಗಿಗುಡ್ಡದಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಸುಮಾರು ೬೦ಜನರನ್ನು ಬಂಧಿಸಲಾಗಿದ್ದು, ೨೪ಜನರ ಮೇಲೆ ಎಫ್.ಐ.ಆರ್.ದಾಖಲಿಸಲಾಗಿದೆ. ಸುರಕ್ಷತಾ ದೃಷ್ಠಿಯಿಂದ ಬಂಧಿತರನ್ನು ಚಿತ್ರದುರ್ಗ ಜಿಲ್ಲೆಗೆ ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.


ಅವರು ಇಂದು ಘಟನೆ ನಡೆದ ರಾಗಿಗುಡ್ಡ ಪ್ರದೇಶದ ಸಂತ್ರಸ್ಥರ ಮನೆಗಳಿಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಈ ಘಟನೆಯಲ್ಲಿ ಬಾಧಿತರಾಗಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೊಬ್ಬರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾಂತ್ವನ ಹೇಳಿದ ನಂತರ ಮಾಧ್ಯಮದ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು.


ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ಹಾಗೂ ಈದ್‌ಮಿಲಾದ್ ಹಬ್ಬಗಳು ಸಂಭ್ರಮದಿಂದ ನಡೆದಿವೆ. ಆದಾಗ್ಯೂ ಈ ರೀತಿಯ ಘಟನೆ ನಡೆದಿರುವುದು ದುರದೃಷ್ಟಕರ. ಪ್ರಸ್ತುತ ಸಂದರ್ಭದಲ್ಲಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಸೆಕ್ಷನ್ ೧೪೪ಜಾರಿಗೊಳಿಸಲಾಗಿದೆ. ಈ ಸೆಕ್ಷನ್‌ನ್ನು ಶೀಘ್ರದಲ್ಲಿ ತೆರವುಗೊಳಿಸಿ ಜನಜೀವನ ಸುಗಮವಾಗಿರುವಂತೆ ನೋಡಿಕೊಳ್ಳಲಾಗುವುದು. ಶಿವಮೊಗ್ಗ ನಗರದ ಜನತೆ ಯಾವುದೇ ಆತಂಕಕ್ಕೆ ಒಳಗಾಗದಂತೆ ಸಚಿವ ಮಧು ಎಸ್.ಬಂಗಾರಪ್ಪ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


ಧರ್ಮ, ಪಕ್ಷ, ಉದ್ದೇಶಗಳನ್ನು ಬಿಟ್ಟು, ಈ ಸಂದರ್ಭದಲ್ಲಿ ಕಾನೂನಿನ ಪರವಾಗಿ ಕಾರ್ಯನಿರ್ವಹಿಸಲು ರಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ನಗರದ ಶಾಂತಿ-ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಹಾಗೂ ಅಪರಾಧಕೃತ್ಯವೆಸಗುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ವಹಿಸುವಂತೆಯೂ ಸೂಚಿಸಿರುವುದಾಗಿ ತಿಳಿಸಿದ ಅವರು, ಈ ಸಂಬಂಧ ಕ್ಷಣಕ್ಷಣದ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪಡೆದುಕೊಳ್ಳಲಾಗುತ್ತಿದೆ ಅಲ್ಲದೆ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ ಎಂದರು.


ಶ್ರಮಿಕ ವರ್ಗದ ಜನರೇ ಹೆಚ್ಚಾಗಿರುವ ರಾಗಿಗುಡ್ಡ ಪ್ರದೇಶದಲ್ಲಿ ಶಾಂತಿ ನೆಲೆಸಬೇಕು. ಈ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದಲ್ಲದೇ ಅವಕಾಶವಿದ್ದಲ್ಲಿ ಸಂತ್ರಸ್ಥರಿಗೆ ಪರಿಹಾರ ಕೊಡಿಸಲು ಯತ್ನಿಸಲಾಗುವುದು ಎಂದವರು ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಸೇರಿದಂತೆ ಮೆಗ್ಗಾನ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!