ಶಿವಮೊಗ್ಗ,ಅ.01:
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಅ.02 ಮತ್ತು 03 ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಏರ್ಪಡಿಸಿದ್ದು, ಆಯ್ಕೆ ಸ್ಪರ್ಧೆಯನ್ನು ಕೆಳಕಂಡಂತೆ ನಡೆಸಲಾಗುವುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿರುತ್ತಾರೆ.
ಅ.02 ರಂದು ಆಯ್ಕೆ ನಡೆಸಲಾಗುವ ಕ್ರೀಡೆಗಳು: ಲಾನ್ ಟೆನ್ನಿಸ್, ನೆಟ್‍ಬಾಲ್, ಈಜು, ಕುಸ್ತಿ, ಬ್ಯಾಸ್ಕೆಟ್‍ಬಾಲ್, ಟೇಬಲ್ ಟೆನ್ನಿಸ್, ಹಾಕಿ, ಹ್ಯಾಂಡ್‍ಬಾಲ್, ಪುಟ್ಬಾಲ್, ಬಾಲ್‍ಬ್ಯಾಡ್ಮಿಂಟನ್, ಯೋಗ, ಮತ್ತು ಜುಡೋ.
ಅ.03 ರಂದು ಏರ್ಪಡಿಸಲಾಗುವ ಕ್ರೀಡೆಗಳು; ಅಥ್ಲೇಟಿಕ್, ವಾಲಿಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್, ಷಟಲ್ ಬ್ಯಾಡ್ಮಿಂಟನ್.
ಈ ಕ್ರೀಡೆಗಳಲ್ಲಿ ಸ್ಪರ್ಧಿಸುವವರ ಗಮನಕ್ಕೆ: ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಕ್ರೀಡೆಯಲ್ಲಿ ಪ್ರಥಮ /ಆಯ್ಕೆ ತಂಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ನೇರವಾಗಿ ಸಂಘಟಿಸಲಾಗುವ ಕ್ರೀಡೆಗಳಲ್ಲಿ ಕನಿಷ್ಠ 4 ತಂಡಗಳು ಇರಬೇಕು. ಇಲ್ಲದಿದ್ದಲ್ಲಿ ಆಯ್ಕೆ ನಡೆಸಿ ಮುಂದಿನ ಹಂತಕ್ಕೆ ಕಳುಹಿಸಲಾಗುವುದು.
ತಾಲೂಕು ಮಟ್ದ ವಿಜೇತ ಕ್ರೀಡಾಪಟುಗಳು ಭಾಗವಹಿಸುವ ಸಮಯದಲ್ಲಿ ಆಧಾರ್ ಕಾರ್ಡ್ ತರುವುದು ಕಡ್ಡಾಯವಾಗಿದೆ. ಕ್ರೀಡಾಕೂಟ ನಡೆಯುವ ದಿನಾಂಕದಂದು ಬೆಳಗ್ಗೆ 10.00 ರೊಳಗಾಗಿ ನೋಂದಾವಣೆ ಮಾಡಿಕೊಂಡವರಿಗೆ ಮಾತ್ರ ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ. ಶಿವಮೊಗ್ಗ ತಾಲೂಕು ಹೊರತುಪಡಿಸಿ ಇತರೆ ತಾಲೂಕುಗಳಿಂದ ಭಾಗವಹಿಸುವ ಕ್ರೀಡಾಪಟುಗಳಿಗೆ ಸಾಮಾನ್ಯ ಪ್ರಯಾಣಭತ್ಯೆಯನ್ನು ಕ್ರೀಡಾಕೂಟ ಮುಕ್ತಾಯವಾದ ನಂತರ ನೀಡಲಾಗುವುದು.