ಶಿವಮೊಗ್ಗ, ಸೆ.29;
ಬರೋಬ್ಬರಿ ನೂರು ವರುಷದ ಹಿಂದೆ ಅಂದರೆ 1923 ರಲ್ಲಿ ವಿಐಎಸ್ ಎಲ್ ಆರಂಭಗೊಂಡ ಹಿನ್ನೆಲೆಯಲ್ಲಿ ಕಾರ್ಖಾನೆಯ ಶತಮಾನೋತ್ಸವವನ್ನು ವೈಭವದಿಂದ ಆಚರಿಸುವ ಜೊತೆಗೆ ಸಹಸ್ರಾರು ಬದುಕುಗಳಿಗೆ ದಾರಿ ದೀಪ ಆಗಿರುವ, ಆಗುತ್ತಿರುವ ಕಾರ್ಖಾನೆಗಳ ಉಳಿವಿಗೆ ಪ್ರಯತ್ನಿಸಲಾಗುತ್ತದೆ ಎಂದು ಹಿರಿಯ ಚಲನಚಿತ್ರ ನಟ ಹಾಗೂ ವಿಐಎಸ್‌ಎಲ್‌ನ ಮಾಜಿ ಉದ್ಯೋಗಿ ಎಸ್.ದೊಡ್ಡಣ್ಣ ಇಂದಿಲ್ಲಿ ತಿಳಿಸಿದರು.
ಅವರು ಇಂದು ಮದ್ಯಾಹ್ನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, 1918ರಲ್ಲಿ ಶಂಕುಸ್ಥಾಪನೆಯಾಗಿದ್ದ ಈ ಕಾರ್ಖಾನೆ ಒಡೆಯರ್ ಹಾಗೂ ಸರ್‌ಎಂವಿ ಆಸರೆಯಿಂದ 23ರಲ್ಲಿ ಆರಂಭಗೊಂಡಿತ್ತು. ಈ ಆಚರಣೆಯನ್ನು ವೈಭವದಿಂದ ನಡೆಸಲು ಶತಮಾನೋತ್ಸವ ಸಮಿತಿಯನ್ನು ರಚಿಸಲಾಗಿದೆ ಎಂದರು.
1968 ರಿಂದ 88 ರವರೆಗೆ ಇಲ್ಲಿ ಎಲ್ಲಾ ಹಂತದ ವಿಭಾಗಗಳ ಮೂಲಕ ವಿಐಎಸ್‌ಎಲ್ ಉದ್ಯೋಗಿಯಾಗಿ ಬದುಕನ್ನು ರೂಪಿಸಿಕೊಂಡಿದ್ದೇನೆ. ತಾಯಿಯಷ್ಟೆ ಕಾರ್ಖಾನೆಯನ್ನು ಪ್ರೀತಿಸುತ್ತೇನೆ. ನನ್ನ ಬಗೆಯಲ್ಲಿ ಪ್ರೀತಿಸುವ ಅಪಾರ ಮಾಜಿ ಉದ್ಯೋಗಿಗಳಿದ್ದಾರೆ. ಎಲ್ಲರನ್ನು ಸೇರಿಸಿ ದೇಶದ ಹಾಗೂ ರಾಜ್ಯದ ನಾಯಕರನ್ನು ಕರೆತಂದು ಸಾಧಕರನ್ನು ಗೌರವಿಸುವ ಮೂಲಕ ಶತಮಾನೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಕಾರ್ಖಾನೆಯನ್ನು ನ.04 ರಂದು ಮೈಸೂರು ರಾಜವಂಶಸ್ಥರಾದ ಯುಧುಗಿರಿ ಒಡೆಯರ್ ಆಗಮಿಸಿ ಉದ್ಘಾಟಿಸಲಿದ್ದಾರೆ. ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಹಾಗೂ ಸ್ಟೀಲ್ ಸಚಿವ ಜ್ಯೋತಿ ಆದಿತ್ಯ ಸಿಂಧೆ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದು, ಸಂಸದ ಬಿ.ವೈ.ರಾಘವೇಂದ್ರ ಅವರ ಸಹಾಯದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ಮರುದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ೬ಕ್ಕೂ ಹೆಚ್ಚು ಸಚಿವರು, ಸಚಿವ ಮಧು ಬಂಗಾರಪ್ಪ ಅವರ ಸಹಾಯದಿಂದ ಬರಲು ಒಪ್ಪಿಕೊಂಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜಯದೇವ ಆಸ್ಪತ್ರೆಯ ದೇವರು ಎಂದೇ ಕರೆಸಿಕೊಳ್ಳುವ ಡಾ.ಸಿ.ಎನ್.ಮಂಜುನಾಥ್, ಇನ್ಫೋಸಿಸ್‌ನ ಸುಧಾಮೂರ್ತಿ, ವಿಐಆರ್‌ಎಲ್‌ನ ವಿಜಯ ಸಂಕೇಶ್ವರ, ಪ್ರಭಾಕರ್ ಕೋರೆ ಅವರನ್ನು ಸನ್ಮಾನಿಸುವ ಉದ್ಧೇಶವಿದೆ ಎಂದರು.
ಕಾರ್ಖಾನೆಯ ಜೊತೆಗೆ ಬೆಳೆದ ಬದುಕಿನ ಜೊತೆಗೆ ವಿವರಣೆ ನೀಡಿದ ದೊಡ್ಡಣ್ಣ ಅವರು ಅತ್ಯುನ್ನತ ಮಟ್ಟದಲ್ಲಿ ಶತಮಾನೋತ್ಸವ ಆಚರಿಸುವ ಜೊತೆಗೆ ಕಾರ್ಖಾನೆ ಉಳಿವಿಗೆ ಪ್ರಯತ್ನಿಸಲಾಗುತ್ತದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹಾಗೂ ಕಾರ್ಖಾನೆಯನ್ನು ಉಳಿಸಲು ಬೆಂಗಳೂರಿನ ಕೆನರಾ ಬ್ಯಾಂಕ್‌ನಲ್ಲಿ ವಿಐಎಸ್‌ಎಲ್ ಶತಮಾನೋತ್ಸವ ಹೆಸರಿನ ಖಾತೆ ಮಾಡಲಾಗಿದ್ದು, ಧನ ಸಹಾಯ ಮಾಡುವಂತೆ ಕೋರಿದರು. ಖಾತೆ ಸಂಖ್ಯೆ 110134263608 ಐಎಫ್‌ಎಸ್‌ಸಿ: CNRB0000405 ಆಗಿರುತ್ತದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇವಣ್ಣ ಸಿದ್ದಯ್ಯ, ವೇದವ್ಯಾಸ್, ಅಶೃತ್ ಹಾಗೂ ನರಸಿಂಹಚಾರ್ ಉಪಸ್ಥಿತರಿದ್ದರು.