ಶಿವಮೊಗ್ಗ ಸೆಪ್ಟೆಂಬರ್ 23,
     ದೌರ್ಜನ್ಯ ಪ್ರತಿಬಂಧ ಕಾಯ್ದೆಯಡಿ ದಾಖಲಾದ ದೌರ್ಜನ್ಯ ಪ್ರಕರಣಗಳನ್ನು ವಿಳಂಬವಿಲ್ಲದೆ ವಿಲೇವಾರಿ ಮಾಡಿ ಪರಿಹಾರ ಧನ ನೀಡುವುದು ಮತ್ತು ಇತರೆ ಕುಂದುಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.


     ದಿ: 22-09-2023 ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ(ದೌರ್ಜನ್ಯ ಪ್ರತಿಬಂಧ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


     ದೌರ್ಜನ್ಯ ಪ್ರಕರಣ ದಾಖಲಾಗಿ ಪೊಲೀಸ್ ಠಾಣೆಗಳಲ್ಲಿ ಚಾರ್ಜ್‍ಶೀಟ್ ಬಾಕಿ ಇರುವುದು ಹಾಗೂ ಪರಿಹಾರ ಧನ ಬಾಕಿ ಇರುವ ಪ್ರಕರಣಗಳ ಪಟ್ಟಿ ಮಾಡಿ ಶೀಘ್ರದಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
      ಸಮಿತಿ ನಾಮನಿರ್ದೇಶಿತ ಸದಸ್ಯರಾದ ರಾಜಕುಮಾರ್ ಮಾತನಾಡಿ, ಭದ್ರಾವತಿ ತಾಲ್ಲೂಕಿನ ಆರ್‍ಎಫ್‍ಓ ಜಗದೀಶ್ ಮತ್ತು ಎಸಿಎಫ್ ರತ್ನಪ್ರಭ ಎಂಬುವವರು ಎಸ್‍ಸಿ/ಎಸ್‍ಟಿ ಜನಾಂಗಕ್ಕೆ ಸೇರಿದ ಬಡವರಿಗೆ ತೊಂದರೆ ನೀಡುತ್ತಿದ್ದಾರೆ. ಕಲ್ಲಾಪುರದ ದಲಿತ ಯುವಕನೋರ್ವ ಆರ್‍ಎಫ್‍ಓ ಜಗದೀಶ್‍ರವರ ಅಕ್ರಮದ ಬಗ್ಗೆ ಡಿಎಫ್‍ಓ ರವರಿಗೆ ತಿಳಿಸಿದ್ದರಿಂದ ಅವರಿಗೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದು ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ ಅವರು ದೌರ್ಜನ್ಯ ಪ್ರಕರಣದಡಿ ಜಾಮೀನು ಪಡೆದು ಬಂದ ಆರೋಪಿಗಳು ಮತ್ತೆ ಸಂತ್ರಸ್ತರಿಗೆ ದೌರ್ಜನ್ಯವೆಸಗದಂತೆ ಕ್ರಮ ವಹಿಸಬೇಕೆಂದರು.


     ಕೆ.ಆರ್.ಪುರಂ ನ ದಲಿತ ಯುವಕ ದಿಲೀಪ್ ಎಂಬುವವ ಮಡಿವಾಳ ಜನಾಂಗದ ಹುಡುಗಿಯನ್ನು ಪ್ರೀತಿಸುತ್ತಿದ್ದು, ಹುಡುಗಿ ಮನೆಯವರು ಹುಡುಗನ ಮನೆಗೆ ಬಂದು ಹೊಡೆದು ಅವಮಾನ ಮಾಡಿದ್ದರಿಂದ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಒದಗಿಸುವಂತೆ ಕೇಳಿಕೊಂಡರು.
      ಅಂಬೇಡ್ಕರ್ ಭವನದಲ್ಲಿ ಸಿಬ್ಬಂದಿ ಕೊರತೆ ಇದ್ದು ನಿಯೋಜಿಸುವಂತೆ ಹಾಗೂ ಹರಮಘಟ್ಟ ಗ್ರಾಮದಲ್ಲಿ ರುದ್ರಭೂಮಿಗೆ ಭೂಮಿಯನ್ನು ಮುಂಚೆ ಮಂಜೂರಾದ ಸರ್ವೇ ನಂ ನಲ್ಲಿ ನೀಡುವಂತೆ ಕೋರಿದರು.


      ಸದಸ್ಯರಾದ ಬಿ.ಜಗದೀಶ್‍ರವರು ಪ್ರಸ್ತಾವಿಸಿದ ವಿಷಯಗಳಿಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಕಲ್ಲುಗಂಗೂರು ಗ್ರಾಮದ ಆಸುಪಾಸಿನ ಕೋಳಿ ಫಾರಂ ಗಳ ಕುರಿತು ಡಿಹೆಚ್‍ಓ, ಇಓ ಜಂಟಿ ವೀಕ್ಷಣೆ ಕೈಗೊಳ್ಳಬೇಕು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಪಡೆದು ಜನವಸತಿಯ 1 ಕಿ.ಮೀ ವ್ಯಾಪ್ತಿಯಲ್ಲಿದ್ದರೆ ಅವುಗಳನ್ನು ರದ್ದುಪಡಿಸುವಂತೆ ಸೂಚಿಸಿದರು.
     ಹಾಗೂ ಸರ್ಕಾರದ ಮರಳು ಕ್ವಾರೆಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ದೂರಿನ ಕುರಿತು ಶಿವಮೊಗ್ಗ ಎಸಿ ಅಧ್ಯಕ್ಷತೆಯ ಟಾಸ್ಕ್‍ಫೋರ್ಸ್ ಸಮಿತಿಯು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದ ಅವರು ನಗರ ಭಾಗದ  ಅನಧಿಕೃತ ಕ್ವಾರೆಗಳನ್ನು ಸೀಜ್ ಮಾಡಲಾಗಿದೆ ಎಂದರು.
      ಸದಸ್ಯರಾದ ಎಂ.ಏಳುಕೋಟಿರವರ ಮನವಿ ಕುರಿತು ಜಿಲ್ಲಾಧಿಕಾರಿಗಳು ಹಾಲಲಕ್ಕವಳ್ಳಿ ಗ್ರಾಮಕ್ಕೆ ಇನ್ನು 10 ರಿಂದ 15 ದಿನಗಳ ಒಳಗೆ ಕೆಎಸ್‍ಆರ್‍ಟಿಸಿ ಬಸ್ ಸೌಲಭ್ಯ ನೀಡುವಂತೆ ಕೆಎಸ್‍ಆರ್‍ಟಿಸಿ ಡಿಸಿ ಯವರಿಗೆ ಸೂಚಿಸಿದರು.    

 
   ಸದಸ್ಯ ಜಗದೀಶ್, ಎಸ್‍ಸಿಪಿ/ಟಿಎಸ್‍ಪಿ ಘಟಕ ಯೋಜನೆಯಡಿ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಚರಂಡಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೂ.3.5 ಕೋಟಿ ಹಗರಣ ಆಗಿದೆ ಎಂದು ದೂರಿದರು. ಜಿ.ಪಂ.ಸಿಇಓ ಪ್ರತಿಕ್ರಿಯಿಸಿ ಈ ಕುರಿತು ವಿಚಾರಣೆ ನಡೆಸಲು ಎರಡು ವಿಚಾರಣಾ ಸಮಿತಿಗಳ ರಚನೆಯಾಗುತ್ತಿದ್ದು, ತನಿಖೆ ನಡೆಸಲಾಗುವುದು ಎಂದರು.
   ಸದಸ್ಯ ಜಗದೀಶ್ ಅಬ್ಬಲಗೆರೆ ವ್ಯಾಪ್ತಿಯ ಮುದ್ದಣ್ಣನ ಕೆರೆ ಮಣ್ಣನ್ನು ಶ್ರೀಮಂತ ವ್ಯಕ್ತಿಗಳಿಗೆ ನೀಡಿ ಸ್ಥಳೀಯ ರೈತರಿಗೆ ವಂಚನೆಯಾಗಿದೆ. ಎಂಎಂಡಿಆರ್ ಕಾಯ್ದೆ ಪ್ರಕಾರ ಇಲ್ಲಿ ಮಣ್ಣು ತೆಗೆಯಲು ಅನುಮತಿ ನೀಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿರುದ್ದ ಪ್ರಕರಣ ದಾಖಲಿಸಬೇಕು.  
           ಪಿ ಸಿ ಜಯಣ್ಣ ಎಂಬ ವ್ಯಕ್ತಿ ಭದ್ರಾವತಿ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪರಿಶಿಷ್ಟ ವರ್ಗದ ಮಹಿಳಾ ಅಧಿಕಾರಿಗೆ ತೊಂದರೆ ಕೊಡುತ್ತಿದ್ದಾರೆ ಹಾಗೂ ಅನೇಕ ಅಧಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದರು. ಜಿಲ್ಲಾಧಿಕಾರಿಗಳು ಬಿಸಿಎಂ ಅಧಿಕಾರಿಗಳು ಪಿ.ಸಿ ಜಯಣ್ಣ ವಿರುದ್ದ ದೂರು ಸಲ್ಲಿಸುವಂತೆ ತಿಳಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.


    ಸದಸ್ಯ ಹೆಚ್.ಬಸವರಾಜ ಹಸ್ವಿ ಮಾತನಾಡಿ, ಸೊರಬ ತಾಲ್ಲೂಕಿನ ಕುಬಟೂರು ಗ್ರಾಮದ ದೇವಮ್ಮ ಎಂಬುವವರ ಮನೆ ಕಳೆದ ನೆರೆ ಸಮಯದಲ್ಲಿ ಬಿದ್ದಿದ್ದು ದಾಖಲೆಗಳು ಮೃತ ಗಂಡನ ಹೆಸರಿನಲ್ಲಿದೆ ಎಂದು ಈವರೆಗೆ ಆಕೆಗೆ ಪರಿಹಾರ ನೀಡಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಂಡು ಆಕೆಗೆ ನ್ಯಾಯ ಒದಗಿಸಬೇಕೆಂದರು. ಹಾಗೂ ಸೊರಬ ತಾಲ್ಲೂಕಿನ ಬಿಸಿಎಂ ಹಾಸ್ಟೆಲ್ ಒಂದರಲ್ಲಿ ಬಹುತೇಕ ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳಿದ್ದರೂ ಅವರಿಗೆ ಮಾಂಸಾಹಾರವನ್ನು ನೀಡುತ್ತಿಲ್ಲ. ಅವರಿಗೆ ಮಾಂಸಾಹಾರ ಬೇಡವೆಂದು ಬರೆಸಿಕೊಂಡು ಕೇವಲ ಸಸ್ಯಾಹಾರ ನೀಡಲಾಗುತ್ತಿದೆ ಎಂದು ದೂರಿದರು.


    ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ನೆರೆ ಸಂತ್ರಸ್ತೆ ವಿಚಾರವನ್ನು ಪರಿಶೀಲಿಸಿ ಶೀಘ್ರವಾಗಿ ಪರಿಹಾರ ನೀಡುವಂತೆ ಹಾಗೂ ಬಿಸಿಎಂ ಅಧಿಕಾರಿಗಳು ವಿದ್ಯಾರ್ಥಿಗಳ ಪೋಷಕರನ್ನು ಕರೆಯಿಸಿ ಮಾತನಾಡಿ, ಅವರು ಮಾಂಸಾಹಾರಕ್ಕೆ ಸಮ್ಮತಿ ನೀಡಿದರೆ ಮಾಂಸಾಹಾರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
      ಸದಸ್ಯ ನಾಗರಾಜ್ ಬಿ ಎಸ್ ಮಾತನಾಡಿ ವಿದ್ಯಾನಗರದಲ್ಲಿ ಸರ್ಕಾರಿ ಶಾಲೆಗೆ ಸೇರಿದ ಜಾಗವನ್ನು ಶ್ರೀಕಾಂತ ಕಾಮತ್ ಎಂಬ ಪ್ರಭಾವಿ ವ್ಯಕ್ತಿ ಕಬಳಿಸಲು ಪ್ರಯತ್ನಿಸುತ್ತಿದ್ದು ಇದನ್ನು ತಡೆಗಟ್ಟಿ ಸರ್ಕಾರಿ ಭೂಮಿ ರಕ್ಷಿಸುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿಗಳು, ಶಿವಮೊಗ್ಗ ಎಸಿ ಮತ್ತು ಪಾಲಿಕೆ ಇಂಜಿನಿಯರ್ ಜಂಟಿಯಾಗಿ ಸ್ಥಳ ಪರಿಶೀಲಿಸಿ ಇನ್ನು 15 ರಿಂದ 20 ದಿನಗಳಲ್ಲಿ ಈ ಕುರಿತು ಕ್ರಮ ವಹಿಸಿ ವರದಿ ನೀಡುವಂತೆ ಸೂಚಿಸಿದರು.
       ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿ ವೇಳೆ ಎಸ್‍ಸಿ/ಎಸ್‍ಟಿ ವರ್ಗದವರಿಗೆ ಪ್ರಾಶಸ್ತ್ಯ ನೀಡುವಂತೆ ಸದಸ್ಯರು ಕೋರಿದರು. ಹಾಗೂ ಹೊರಗುತ್ತಿಗೆ ನೇಮಕಾತಿ ವೇಳೆ ಹಣ ನೀಡಲು ಬೇಡಿಕೆ ಇಡುತ್ತಿರುವ ಏಜೆನ್ಸಿನಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.


      ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಮಲ್ಲೇಶಪ್ಪ ಮಾತನಾಡಿ, ಜಿಲ್ಲೆಯಲ್ಲಿ 2033 ರ ಆಗಸ್ಟ್ ಮಾಹೆವರೆಗೆ ಒಟ್ಟು 68 ದೌರ್ಜನ್ಯ ಪ್ರಕರಣ ದಾಖಲಾಗಿದ್ದು 39 ಚಾರ್ಜ್‍ಶೀಟ್ ಆಗಿದೆ. ಇನ್ನುಳಿದ ಪ್ರಕರಣ ವಿವಿಧ ಹಂತದಲ್ಲಿದ್ದು ಒಟ್ಟು 87.75 ಲಕ್ಷ ಪರಿಹಾರ ಧನ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು
   ಸಭೆಯಲ್ಲಿ   ಸದಸ್ಯರಾದ ಕೆ.ವೈ ರಾಮಚಂದ್ರಪ್ಪ, ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಸರ್ಕಾರಿ ಅಭಿಯೋಜಕರು, ಶಿವಮೊಗ್ಗ ಎಸಿ ಸತ್ಯನಾರಾಯಣ, ಸಾಗರ ಎಸಿ ಪಲ್ಲವಿ ಸಾತನೂರು, ತಹಶೀಲ್ದಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!