ಹೊಸನಗರ; ರಾಜ್ಯ ಸರಕಾರ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ಗ್ಯಾರೆಂಟಿ ಯೋಜನೆಗಳ ಪೈಕಿ ನಾಲ್ಕು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಅವರು ಇಲ್ಲಿನ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಕಾಂಗ್ರೆಸ್ ಆಡಳಿತದ ಈ ಅವಧಿ ಐತಿಹಾಸಿಕ ದಿನಗಳಾಗಲಿವೆ. ಇಷ್ಟಕ್ಕೇ ಸೀಮಿತ ಆಗದೇ, ಸಮಗ್ರ ಅಭಿವೃದ್ಧಿ ಕಾರ್ಯಗಳಿಗೂ ಹಂತ ಹಂತವಾಗಿ ಚಾಲನೆ ದೊರೆಯಲಿದೆ. ಸದೃಢ ಸರಕಾರ ಜನಪರ ಕಾಳಜಿಯಿಂದ ಕಾರ್ಯನಿರ್ವಹಿಸಲಿದೆ ಎಂದರು.
ಮಲೆನಾಡು ಭಾಗದಲ್ಲಿ ಶೇ.೬೦ರಷ್ಟು ಮಳೆ ಕೊರತೆ ಆಗಿರುವುದು ಸಂಕಷ್ಟ ತಂದಿದೆ. ೧೬೭ ತಾಲೂಕುಗಳನ್ನು ರಾಜ್ಯ ಸರಕಾರ ಬರಪೀಡಿತ ಎಂದು ಘೋಷಿಸಿದೆ. ಕುಡಿವ ನೀರು ಹಾಗೂ ಮೇವಿಗೆ ಕೊರತೆ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿಶೇಷವಾಗಿ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿವ ನೀರಿನ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.
ಗೃಹಲಕ್ಷ್ಮಿಯೋಜನೆಯ ಅರ್ಜಿಗಳ ಸಲ್ಲಿಕೆಗೆ ತಾಂತ್ರಿಕ ಅಡೆತಡೆಗಳು ಬಂದಿರುವ ಕುರಿತು ತಿಳಿದುಬಂದಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳು ಹಾಗೂ ಸಚಿವರ ಗಮನಕ್ಕೆ ತರಲಿದ್ದೇನೆ. ಎಲ್ಲಾ ಅರ್ಹರಿಗೂ ಯೋಜನೆಯ ಫಲ ಸಿಗಬೇಕು ಎನ್ನುವುದು ಸರಕಾರದ ಇಚ್ಛೆಯಾಗಿದೆ ಎಂದರು.
ಸಂಸತ್ ಚುನಾವಣೆಯ ಅಭ್ಯರ್ಥಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಸಂಸತ್ ಚುನಾವಣೆಗೆ ಪಕ್ಷ ಸಿದ್ಧತೆ ನಡೆಸುತ್ತಿದೆ. ಚುನಾವಣೆಗೂ ೬ ತಿಂಗಳ ಮುಂಚಿತವಾಗಿ ಪಕ್ಷ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಿದೆ. ಪಕ್ಷದ ವರಿಷ್ಠರು ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸುತ್ತಾರೆ ಎಂದರು. ತಮಗೆ ಅವಕಾಶ ದೊರೆತರೆ ಸ್ಪರ್ಧಿಸುತ್ತೀರಾ ಎಂದಾಗ, ಪಕ್ಷ ಬಯಸಿದಲ್ಲಿ, ಹಿರಿಯರು ಸೂಚನೆ ನೀಡಿದರೆ, ಸ್ಪರ್ಧಿಸಲು ಸಿದ್ದ, ಅದಕ್ಕೇಕೆ ಹಿಂದೇಟು ಎಂದು ಉತ್ತರಿಸಿದರು.
ಮಾಜೀ ಶಾಸಕ ಹಾಲಪ್ಪನವರನ್ನು ಜನ ತೀರಸ್ಕಾರಿಸಿದ್ದಾರೆ ಅವರ ಬಗ್ಗೆ ನಾನು ಏಕೆ ಮಾತನಾಡಬೇಕು: ಚುನಾವಣೆಯ ಮುಂಚೆ ಹಾಲಪ್ಪನವರು ನಿಮ್ಮ ಬಗ್ಗೆ ನೀವು ಹಾಲಪ್ಪನವರ ಬಗ್ಗೆ ಕೆಂಡ ಮಂಡಲವಾಗಿದ್ದವರೂ ಈಗ ಇಬ್ಬರು ಸೈಲೆಂಟ್ ಆಗಿದ್ದಿರಲ್ಲ ಎಂಬ ಪ್ರಶ್ನೆಗೆ ಮಾಜೀ ಶಾಸಕ ಹರತಾಳು ಹಾಲಪ್ಪನವರನ್ನು ಜನರೇ ತೀರಸ್ಕರಿಸಿರುವಾಗ ಅವರ ಬಗ್ಗೆ ನಾನು ಏಕೆ ಮಾತನಾಡಬೇಕು ನನ್ನದೇನು ಜನಸೇವೆ ಮಾಡುವ ಗುರಿಯೊಂದೆ ಆಗಿದ್ದು ಇನ್ನೂ ಐದು ವರ್ಷಗಳ ಕಾಲ ಜನಸೇವಕನಾಗಿ ಜನರ ಜೊತೆಗೆ ಇರುವುದೇ ನನ್ನ ಕೆಲಸ ಎಂದರು.
ಹೊಸನಗರ ತಾಲ್ಲೂಕನ್ನು ಸಮಗ್ರ ಅಭಿವೃದ್ಧಿ ಪಡಿಸುವುದೇ ನನ್ನ ಗುರಿ: ಈ ಹಿಂದೆ ಶಾಸಕನಾಗಿದ್ದಾಗ ಹೊಸನಗರ ತಾಲ್ಲೂಕಿನ ಅನೇಕ ಅಬಿವೃದ್ಧಿ ಕೆಲಸವನ್ನು ಮಾಡಿದ್ದು ಉಳಿದಿರುವುದು ಸಣ್ಣ ಪುಟ್ಟ ರಸ್ತೆಗಳ ಕಾಮಾಗಾರಿ ಹಾಗೂ ಪಟ್ಟಣ ಪಂಚಾಯತಿಗೆ ನೂತನ ಕಟ್ಟಡ ಶಾಶ್ವತ ಕುಡಿಯುವ ನೀರಿನ ಯೋಜನೆ ಇವುಗಳ ಕಾಮಾಗಾರಿ ಇವುಗಳನ್ನು ತಕ್ಷಣ ಮಾಡಲು ಸಿದ್ದರಾಗಿದ್ದು ಗ್ಯಾರಂಟಿ ಯೋಜನೆ ಮುಗಿದ ಬಳಿಕ ಕಾಮಾಗಾರಿ ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಪ್ರದಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ತಾ.ಪ. ಮಾಜೀ ಸದಸ್ಯ ಏರಿಗೆ ಉಮೇಶ್, ಆಶ್ರಯ ಸಮಿತಿ ಮಾಜೀ ಅಧ್ಯಕ್ಷ ಶ್ರೀನಿವಾಸ್ ಕಾಮತ್, ಹಿರಿಯರಾದ ಹೆಚ್. ಮಹಾಬಲರಾವ್, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಪಟ್ಟಣ ಪಂಚಾಯತಿ ಸದಸ್ಯ ಅಶ್ವಿನಿಕುಮಾರ್, ಎಂ.ಪಿ. ಸುರೇಶ್, ಹೆಚ್.ಎಂ. ನಿತ್ಯಾನಂದ,ಗೋಪಾಲ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಜಯನಗರ ಗುರು, ನಾಸೀರ್, ಶ್ರೀಮತಿ ನೇತ್ರಾ ಸುಬ್ರಾಯಭಟ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.