ಶಿವಮೊಗ್ಗ: ಪ್ರತಿದಿನ ಬೆಳಗ್ಗೆ ಪ್ರತಿ ಮನೆಯ ಸೇವೆ ಮಾಡುವ ಪೌರ ಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಎಂದು ಸಮಾಜಸೇವಕ ಎಂ. ಶ್ರೀಕಾಂತ್ ಹೇಳಿದ್ದಾರೆ.
ಅವರು ಇಂದು ನಗರದ ವೀರಶೈವ ಕಲ್ಯಾಣ ಮಂದಿರಲ್ಲಿ ಸದ್ಭಾವನಾ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಶಿವಮೊಗ್ಗ ವತಿಯಿಂದ ಎಂ. ಶ್ರೀಕಾಂತ್ ನೇತೃತ್ವದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಾಗಿನ ವಿತರಿಸಿ ಮಾತನಾಡಿದರು.
ಇದು ಕಳೆದ ಎರಡು ವರ್ಷಗಳಿಂದ ನಿಮ್ಮೆಲ್ಲರ ಸಹೋದರನಾಗಿ ಈ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇನೆ. ಸ್ವಚ್ಛತೆಯ ನಿಮ್ಮ ಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ನೀವು ಎಷ್ಟೇ ಕಷ್ಟ ಬರಲಿ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರೂ ನಿಮ್ಮಂತೆ ಪೌರ ಕಾರ್ಮಿಕರಾಗುವುದು ಬೇಡ ಎಂದರು.
ನನಗೆ ಪೌರ ಕಾರ್ಮಿಕರ ಒಡನಾಟ ಇದೆ. ಮತ್ತು ಅವಕ ಕಷ್ಟದ ಅರಿವಿದೆ. ನನಗೆ ಯಾವುದೇ ಅಧಿಕಾರ ಇಲ್ಲದಿದ್ದರೂ ಬಡವರ ಸೇವೆ ಮಾಡುತ್ತಾ ಬಂದಿದ್ದೇನೆ. ರಾಜಕಾರಣ ತನ್ನ ಸ್ವಾರ್ಥಕ್ಕಾಗಿ ಮಾಡಬಾರದು. ಬಡವರ ಹಿತಕ್ಕಾಗಿ ರಾಜಕಾರಣ ಮಾಡಬೇಕು. ನಾನು ಸೋತಾಗ ಇನ್ನು ಮುಂದೆ ರಾಜಕಾರಣ ಮಾಡಬಾರದು ಎಂದು ತೀರ್ಮಾನಿಸಿದ್ದೆ. ಆದರೆ, ಬಣ್ಣ ಹಚ್ಚಿದ ಮೇಲೆ ಪಾತ್ರ ಮಾಡಲೇಬೇಕು. ಬಿಡಲು ಮನಸಾಗುವುದಿಲ್ಲ. ಬದಲಾವಣೆ ಬಯಸಿದ್ದೇನೆ. ಇನ್ನು 15 ದಿನದಲ್ಲಿ ಕಾಂಗ್ರೆಸ್ ಸೇರಲು ನಿಶ್ಚಯಿಸಿದ್ದೇನೆ ಎಂದು ಘೋಷಿಸಿದರು.
ಪ್ರತಿನಿತ್ಯ ಜನ ಅವರ ಕೆಲಸ ಮಾಡಿಸಿಕೊಳ್ಳಲು ಬರುತ್ತಾರೆ. ಅದಕ್ಕಾಗಿಯಾದರೂ ಅಧಿಕಾರ ಬೇಕೇ ಬೇಕಾಗುತ್ತದೆ. ನನ್ನ ಜೊತೆಗಾರರಿಗೂ ಒಳ್ಳೆಯದಾಗಬೇಕು ಎಂಬ ದೃಷ್ಟಿಯಿಂದ ಈ ತೀರ್ಮಾನ ಆಗಬೇಕು ಎಂದರು.
ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಶ್ರೀಕಾಂತ್ ಅವರು ಕೊಡುಗೈ ದಾನಿ. ಮಾನವೀಯ ಹೃದಯವುಳ್ಳ ವ್ಯಕ್ತಿ. ಸದ್ಭಾವನಾ ಅಂದರೆ ಎಲ್ಲರೂ ಸಮಾನತೆಯಿಂದ ಕೊಂಡೊಯ್ಯುವುದು ಎಂದರ್ಥ. ಆ ಅರ್ಥಕ್ಕೆ ಸರಿಯಾಗಿ ಅವರು ನಡೆದುಕೊಳ್ಳುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ಕಿಟ್ ಮತ್ತು ಆಹಾರ ಧಾನ್ಯ ಅವರು ವಿತರಿಸಿದ್ದರು. ಯಾವಾಗಲೂ ಪೌರ ಕಾರ್ಮಿಕರ ಜೊತೆಗೆ ಸ್ಪಂದಿಸಿದ ವ್ಯಕ್ತಿ. ಅವರಿಗೆ ದೇವರು ಆರೋಗ್ಯ, ಆಯಸ್ಸು ಕೊಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ 35 ವಾರ್ಡ್‍ಗಳ ಮಹಿಳಾ ಪೌರ ಕಾರ್ಮಿಕರಿಗೆ ಬಾಗಿನ ನೀಡಲಾಯಿತು. ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮಾರಪ್ಪ, ಪೆಂಚಾಲಯ್ಯ, ರವೀಶ್, ಹಾಗೂ ಪ್ರಮುಖರಾದ ನಾಗರಾಜ್ ಕಂಕಾರಿ, ರಾಜಣ್ಣ, ಪಾಲಾಕ್ಷಿ, ಭಾಸ್ಕರ್, ಗೀತಾ ಸತೀಶ್, ಆನಂದ್, ಗಂಧದಮನೆ ನರಸಿಂಹ, ಭವಾನಿ ನರಸಿಂಹ, ವಿನಯ್ ತಾಂದಳೆ ಮೊದಲಾದವರಿದ್ದರು.