ಸಾಗರ : ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೆ ಯಾತ್ರೆ ಇತಿಹಾಸ ಪುಟದಲ್ಲಿ ದಾಖಲಾಗಿದೆ. ರಾಜ್ಯದಲ್ಲಿ ೫೦೦ ಕಿ.ಮೀ.ಗೂ ಹೆಚ್ಚು ಕಾಲ ಭಾರತ್ ಜೋಡೆ ಪಾದಯಾತ್ರೆ ಯಶಸ್ವಿಯಾಗಿ ನಡೆದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ಬ್ಲಾಕ್ ಕಾಂಗ್ರೇಸ್ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಭಾರತ್ ಜೋಡೋ ಪಾದಯಾತ್ರೆಯ ಒಂದು ವರ್ಷದ ಸ್ಮರಣಾರ್ಥ ಸಾಗರ ಹೋಟೆಲ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ರಾಹುಲ್ ಗಾಂಧಿ ಭಾರತ್ ಜೋಡೋ ನಡೆಸಿದ ಎಲ್ಲ ಕಡೆ ಕಾಂಗ್ರೇಸ್ ಪಕ್ಷ ಅದ್ವಿತೀಯ ಗೆಲುವು ಸಾಧಿಸಿದ್ದರೇ, ಮೋದಿ ಯಾತ್ರೆ ಮಾಡಿದ ಸ್ಥಳಗಳಲ್ಲಿ ಬಿಜೆಪಿ ಸೋತಿದೆ. ದೇಶದಲ್ಲಿ ಎಲ್ಲ ಜಾತಿಧರ್ಮವನ್ನು ಒಗ್ಗೂಡಿಸಿಕೊಂಡು ಹೋಗುವ ಸಂದೇಶವನ್ನು ಭಾರತ್ ಜೋಡೋ ಮೂಲಕ ರಾಹುಲ್ ಗಾಂಧಿ ನೀಡಿದ್ದಾರೆ. ರಾಜ್ಯದ ಜನರು ಕಾಂಗ್ರೇಸ್ ಪಕ್ಷಕ್ಕೆ ಅತಿಹೆಚ್ಚು ಸ್ಥಾನ ನೀಡುವ ಮೂಲಕ ಅಧಿಕಾರ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ ಐದು ಗ್ಯಾರಂಟಿ ಪೈಕಿ ನಾಲ್ಕು ಈಡೇರಿಸಿದ್ದು, ನುಡಿದಂತೆ ನಡೆದ ಸರ್ಕಾರ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಹ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ದೇಶದ ಜನರನ್ನು ಮಾನಸಿಕವಾಗಿ ಒಗ್ಗೂಡಿಸಿದ ಹೆಗ್ಗಳಿಕೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋಗೆ ಸಲ್ಲುತ್ತದೆ. ಪ್ರಜಾಪ್ರಭುತ್ವದ ಮೌಲ್ಯ, ಸಂವಿಧಾನದ ಮೌಲ್ಯಕ್ಕೆ ಜನ ಒಗ್ಗೂಡುವಲ್ಲಿ ರಾಹುಲ್ ಗಾಂಧಿ ಪ್ರಯತ್ನ ಶ್ಲಾಘನೀಯವಾದದ್ದು. ಪಾದಯಾತ್ರೆ ಮುಗಿದು ಒಂದು ವರ್ಷವಾಗಿದ್ದು ದೇಶಾದ್ಯಂತ ಪಾದಯಾತ್ರೆ ಮೂಲಕ ಸಂಭ್ರಮಾಚರಣೆ ಕಾಂಗ್ರೇಸ್ ನಡೆಸುತ್ತಿದೆ ಎಂದು ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿದರು. ಪ್ರಮುಖರಾದ ಸುರೇಶಬಾಬು, ಚೇತನರಾಜ್ ಕಣ್ಣೂರು, ಮಹಾಬಲ ಕೌತಿ, ತಾರಾಮೂರ್ತಿ, ಮಧುಮಾಲತಿ, ಸುಮಂಗಲ ರಾಮಕೃಷ್ಣ, ಎನ್.ಲಲಿತಮ್ಮ, ಪರಿಮಳ, ಪಾರ್ವತಿ ಬೇಸೂರು, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಅಶೋಕ ಬೇಳೂರು ಇನ್ನಿತರರು ಹಾಜರಿದ್ದರು.