ಶಿವಮೊಗ್ಗ: ಹಬ್ಬದ ರೀತಿಯಲ್ಲಿ ಪೌರ ಕಾರ್ಮಿಕರ ಕ್ರೀಡಾಕೂಟ ನಡೆಯುತ್ತಿದೆ ಎಂದು ಪಾಲಿಕೆ ಮೇಯರ್ ಶಿವಕುಮಾರ್ ಹೇಳಿದ್ದಾರೆ.
ಅವರು ಇಂದು ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಪೌರ ಕಾರ್ಮಿಕರಿಗೆ ವರ್ಷದಲ್ಲಿ ಮೂರು ದಿನಗಳ ಕಾಲ ಹಬ್ಬದ ರೀತಿಯಲ್ಲಿ ವೈವಿಧ್ಯಮಯ ಚಟುವಟಿಕೆ ಹಾಗೂ ಕ್ರೀಡಾಕೂಡ ಹಮ್ಮಿಕೊಂಡು ರಾಜ್ಯದಲ್ಲೇ ಮಾದರಿಯಾಗಿ ಕ್ರೀಡಾಕೂಟಗಳನ್ನು ನಡೆಸುತ್ತಿದ್ದೇವೆ. ಈ ಬಾರಿಯೂ ರಾಜ್ಯ ಮಟ್ಟದ ಕ್ರೀಡಾಕೂಟದಂತೆ ಕ್ರಿಕೆಟ್ ಹಬ್ಬ ನಡೆಯುತ್ತಿದೆ. ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಿದ್ದಾರೆ. ಸೆ.೧೨ರಂದು ಡಿಎಆರ್ ಮೈದಾನದಲ್ಲಿ ಅಥ್ಲೆಟಿಕ್ ಕ್ರೀಡಾಕೂಡ ಹಾಗೂ ಸೆ.೨೩ರಂದು ಪೌರ ಕಾರ್ಮಿಕರ ದಿನಾಚರಣೆ ಅದ್ಧೂರಿಯಾಗಿ ನಡೆಯಲಿದೆ ಎಂದರು.
ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್ ಮಾತನಾಡಿ, ೨೦೦೭ರಿಂದಲೇ ಪೌರ ಕಾರ್ಮಿಕರಿಗೆ ವಿಶೇಷ ಪ್ರವಾಸವನ್ನು ಪಾಲಿಕೆ ವತಿಯಿಂದ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಪೌರ ಕಾರ್ಮಿಕರು ಕೇವಲ ಸ್ವಚ್ಛತೆಗೆ ಮಾತ್ರ ಸೀಮಿತ ಆಗಬಾರದು. ಅವರಿಗೂ ಬೇರೆ ಬೇರೆ ರೀತಿಯ ಮನರಂಜನೆ, ಭಾರತ್ ಮಾತಾ ಪೂಜನ್ ಅಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಮುಖ್ಯವಾಗಿ ರಾಜ್ಯದಲ್ಲೇ ಶಿವಮೊಗ್ಗ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಪೌರ ಕಾರ್ಮಿಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುತ್ತಿದೆ ಎಂದರು.
ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಇಂದು ಮೇಯರ್ ಕಪ್ ಕ್ರಿಕೆಟ್ ನಡೆಯುತ್ತಿದೆ. ೧೨ರಂದು ಅಥ್ಲೆಟಿಕ್ಸ್ ಕೂಡ ನಡೆಯಲಿದೆ. ೨೩ರಂದು ಅದ್ದೂರಿಯಾಗಿ ಪೌರಕಾರ್ಮಿಕರ ದಿನಾಚರಣೆ ನಡೆಯಲಿದ್ದು, ಅಂದು ಅನೇಕ ಪೌರ ಕಾರ್ಮಿಕರನ್ನು ಸನ್ಮಾನ ಮಾಡುವುದರ ಮೂಲಕ ಅರ್ಥಗರ್ಭಿತವಾಗಿ ಆಚರಿಸುತ್ತಿದ್ದೇವೆ. ಪಾಲಿಕೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆರ್ಥಿಕ ಬೆಂಬಲ ನೀಡಿ ನiಗೆ ವಿಶ್ವಾಸ ತುಂಬುತ್ತಿದ್ದಾರೆ. ವಿವಿಧ ಹಂತಗಳಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ವಿಶೇಷ ಸೌಲಭ್ಯ ನೀಡಿ ರಾಜ್ಯದಲ್ಲೇ ಮಂಚೂಣಿಯಲ್ಲಿದೆ ಎಂದ ಅವರು, ಪೌರ ಕಾರ್ಮಿಕರ ಭವನದ ಕಾಮಗಾರಿ ಕೂಡ ಅಂತಿಮ ಹಂತದಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು, ವಿಪಕ್ಷ ನಾಯಕಿ ರೇಖಾ ರಂಗನಾಥ್, ಆಯುಕ್ತ ಮಾಯಣ್ಣ ಗೌಡ, ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.