ಶಿವಮೊಗ್ಗ: ಭಾರತ ಎಂದು ಕರೆದರೆ ಏನೂ ತಪ್ಪಿಲ್ಲ. ಹಾಗೆಯೇ ಇಂಡಿಯಾ ಎಂದು ಕರೆದರೂ ತಪ್ಪಿಲ್ಲ. ಈ ಸಣ್ಣ ವಿಚಾರಕ್ಕೆ ಕಾಂಗ್ರೆಸ್‌ನವರು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಐಎನ್‌ಡಿಐಎ ರಚನೆಯಾದ ಬಳಿಗೆ ಎನ್‌ಡಿಎ ಏನೂ ಭಯಗೊಂಡಿಲ್ಲ. ಅದರ ಬದಲು ಆ ಸದಸ್ಯರೇ ಗಾಬರಿಯಾಗಿದ್ದಾರೆ. ಸಣ್ಣ ಸಣ್ಣ ವಿಷಯಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಆ ಚರ್ಚೆಯೇ ಅಪ್ರಸ್ತುತ ಎಂದರು.
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಅತಿ ಬುದ್ಧಿವಂತರು ಈ ರೀತಿ ಹೇಳಿಕೆ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು. ಸನಾತನ ಧರ್ಮ ಎಂಬುದು ದೇವರಲ್ಲಿ ನಂಬಿಕೆ ಇಡುವಂಥದ್ದು ಸ್ಟಾಲಿನ್ ತಾಯಿಯೇ ಪ್ರತಿನಿತ್ಯ ದೇವಸ್ಥಾನಕ್ಕೆ ಹೋಗಿಬರುತ್ತಾರೆ ಎಂದರು.
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಮುಂದೆ ಇಡುತ್ತಾರೆ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಯಾವತ್ತೂ ಚುನಾವಣೆಗಾಗಿ ರಾಜಕಾರಣ ಮಾಡಿಲ್ಲ. ಧರ್ಮವನ್ನು ಅಡ್ಡ ತಂದಿಲ್ಲ. ರಾಮಮಂದಿರವನ್ನು ಚುನಾವಣೆಗೋಸ್ಕರ ಕಟ್ಟುವುದೂ ಇಲ್ಲ. ಅದು ಅನೇಕ ವರ್ಷಗಳ ಹೋರಾಟ ಎಂದರು.
ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು,ರಾಜ್ಯ ಸರ್ಕಾರ ರೈತರ ಹಿತ ಕಾಪಾಡುತ್ತದೆ ಎಂದುಕೊಂಡಿದ್ದೆವು. ಆದರೆ ಅದು ವಿಫಲವಾಗಿದೆ ಎಂದರು.
ಬರಗಾಲ ಘೋಷಣೆ ಬಗ್ಗೆ ದಿನ ತಳ್ಳುತ್ತಿದ್ದಾರೆ. ಆದಷ್ಟು ಬೇಗ ಇಡೀ ರಾಜ್ಯವನ್ನು ಬರಗಾಲ ಎಂದು ಘೋಸಿಸಬೇಕು ಎಂದ ಅವರು, ಸಚಿವ ಶಿವಾನಂದ್ ಪಾಟೀಲ್ ರೈತರ ಬಗ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಅಧಿಕಾರದ ಮದ ತಲೆಗೆ ಏರಿದಾಗ ಇಂತಹ ಮಾತುಗಳು ಬರುತ್ತವೆ ಎಂದರು.