ಸಾಗರ : ಸಮಾಜ ಸುಧಾರಣೆ ಸವಾಲಿನ ಕೆಲಸ. ವೈಜ್ಞಾನಿಕ ಯುಗದಲ್ಲಿ ನಾವಿದ್ದರೂ ದಾರ್ಶನಿಕರು ನಿವಾರಣೆ ಮಾಡಲು ಪ್ರಯತ್ನಿಸಿದ ಮೂಡನಂಬಿಕೆಯನ್ನು ನಾವು ಕೈಬಿಡದೆ ಇರುವುದು ವಿಷಾದಕರ ಸಂಗತಿ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಇಲ್ಲಿನ ದೇವರಾಜ ಅರಸು ಭವನದಲ್ಲಿ ಗುರುವಾರ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ನಾರಾಯಣಗುರು ಜಯಂತಿ ಮತ್ತು ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಸ್ತುತ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದೆ. ಆದರೆ ವಿದ್ಯಾವಂತರು ಸಮಾಜ ಸುಧಾರಣೆಯತ್ತ ಚಿತ್ತ ಹರಿಸದೆ ಇರುವುದು ಬೇಸರ ತರಿಸುತ್ತಿದೆ. ಸಮ ಸಮಾಜ ನಿರ್ಮಾಣಕ್ಕೆ ಎಲ್ಲರ ಕೊಡುಗೆಯೂ ಅತ್ಯಮೂಲ್ಯ.
ಸಮಾಜ ಸುಧಾರಣೆಗೆ ಸಾಮಾಜಿಕ ಪ್ರಜ್ಞೆ ಅತ್ಯಾಗತ್ಯ. ಮೂಲಭೂತವಾದ ಸಿದ್ದಾಂತದಿಂದ ಹೊರಬಂದು ಆದರ್ಶ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ನಾರಾಯಣ ಗುರುಗಳು, ನುಲಿಯ ಚಂದಯ್ಯ ಆದರ್ಶ ಸಮಾಜದ ಕನಸು ಕಂಡು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದವರು. ಅವರ ಕನಸು ಸಾಕಾರಗೊಳಿಸಲು ಎಲ್ಲರೂ ಪ್ರಯತ್ನಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ನಾರಾಯಣ ಗುರುಗಳು ಹಿಂದುಳಿದ ಸಮಾಜಗಳ ಏಳಿಗೆಗಾಗಿ ತಮ್ಮದೆ ರೀತಿಯಲ್ಲಿ ಪ್ರಯತ್ನ ನಡೆಸಿದವರು. ಒಂದೇ ಜಾತಿ ಒಂದೇ ದೇವರು ಎನ್ನುವ ತತ್ವದ ಮೂಲಕ ಮಾನವ ಸಂಕುಲದ ಏಳಿಗೆಗೆ ನಾರಾಯಣ ಗುರುಗಳು ಕೊಡುಗೆ ನೀಡಿದ್ದಾರೆ. ದೇವಾಲಯ,
ಶಿಕ್ಷಣಾಲಯಗಳನ್ನು ಕಟ್ಟಿಸುವ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿದ್ದರೇ, ನುಲಿಯ ಚಂದಯ್ಯ ಮಹಾನ್ ಸಮಾಜ ಸುಧಾರಕರಾಗಿದ್ದವರು. ಯುವಜನಾಂಗಕ್ಕೆ ನಾರಾಯಣಗುರುಗಳು ಮತ್ತು ನುಲಿಯ ಚಂದಯ್ಯ ಆದರ್ಶವಾಗಬೇಕು ಎಂದು ಹೇಳಿದರು.
ನಾರಾಯಣ ಗುರುಗಳ ಕುರಿತು ಮುಖ್ಯ ಶಿಕ್ಷಕ ಗಜೇಂದ್ರ, ನುಲಿಯ ಚಂದಯ್ಯ ಕುರಿತು ಉಪನ್ಯಾಸಕ ಎಸ್.ಎಂ.ಗಣಪತಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಕೊರಮ ಸಮಾಜದ ಅಧ್ಯಕ್ಷ ಡಾ. ಕೆ.ವಿರೂಪಾಕ್ಷಪ್ಪ, ಡಿವೈಎಸ್‌ಪಿ ಗೋಪಾಲಕೃಷ್ಣ ಟಿ. ನಾಯ್ಕ್, ತಾಲ್ಲೂಕು ಪಂಚಾಯ್ತಿ ಇಓ ನಾಗೇಶ್ ಬ್ಯಾಲಾದ್, ಕಲ್ಲಪ್ಪ ಮೆಣಸಿನಾಳ್, ವಿ.ಟಿ.ಸ್ವಾಮಿ, ಜಿ.ಬಸವರಾಜ್ ಇನ್ನಿತರರು ಹಾಜರಿದ್ದರು