ಶಿವಮೊಗ್ಗ: ಇನ್ಮುಂದೆ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ದಂಡ ಖಚಿತ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಹೇಳಿದರು.


ಅವರು ಇಂದು ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಸುಧಾರಿತ ಐಟಿಎಂಎಸ್ ತಂತ್ರಾಂಶದ ಮೂಲಕ ಕ್ಯಾಮೆರಾ ಅಳವಡಿಸಲಾಗಿದೆ. ನಗರದಲ್ಲಿರುವ ಎಲ್ಲಾ ಕ್ಯಾಮರಾಗಳ ಮೂಲಕ ಕೇಂದ್ರೀಕೃತವಾಗಿ ಕಂಬೈಂಡ್ ಅಂಡ್ ಕಂಟ್ರೋಲ್ ಸೆಂಟರ್‌ಗೆ ಅಳವಡಿಸಲಾಗಿದ್ದು ಈ ತಂತ್ರಾಂಶದ ಮೂಲಕ ಯಾರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದರೂ ಕೂಡ ತಕ್ಷಣ ತಿಳಿಯುವುದಲ್ಲದೆ ಅದು ರೆಕಾರ್ಡ್ ಆಗುತ್ತದೆ ಎಂದರು.


ವಾಹನ ಚಾಲಕರು ಸಿಗ್ನಲ್ ಜಂಪ್ ಮಾಡಿದಾಗ ವಾಹನದ ಫೋಟೊ ಮತ್ತು ವೀಡಿಯೋ ತುಣುಕನ್ನು ಎಸ್‌ವಿಡಿ ಕ್ಯಾಮೆರಾಗಳು ಸೆರೆಹಿಡಿಯುತ್ತವೆ. ಇದಲ್ಲದೆ ಹೆಲ್ಮೆಟ್ ಧರಿಸದೆ ಇದ್ದರೆ, ಮೂವರು ಕುಳಿತು ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದರೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುತ್ತಿದ್ದರೆ, ಒನ್‌ವೇ, ನೋ ಎಂಟ್ರಿ, ನೋ ಪಾರ್ಕಿಂಗ್, ಕಾರಿನ ಚಾಲಕರು ಸೀಟ್ ಬೆಲ್ಟ್ ಹಾಕಿಕೊಳ್ಳುವುದು, ಹೀಗೆ ಯಾವುದೇ ರೀತಿಯ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ತಕ್ಷಣವೇ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಮತ್ತು ಮಾಲೀಕರ ವಿಳಾಸಕ್ಕೆ ಅಂಚೆ ಮೂಲಕ ನೋಟೀಸ್ ಕಳಿಸಲಾಗುತ್ತದೆ ಎಂದರು.


ಈಗಾಗಲೇ ಜಿಲ್ಲೆಯಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ ಮಾಡಿದ್ದು, ಮೀಟರ್ ಹಾಕದೆ ಇದ್ದಲ್ಲಿ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.


ಒಬ್ಬ ವ್ಯಕ್ತಿಯ ನೋಟೀಸ್ ವಿವರಗಳು ಇ-ಚಲನ್ ತಂತ್ರಾಂಶಕ್ಕೆ ಸಂಯೋಜಿಸಲಾಗಿದ್ದು, ಆ ವಾಹನಕ್ಕೆ ಸಂಬಂಧಿಸಿದ ಉಲ್ಲಂಘನೆ ಪ್ರಕರಣಗಳ ವಿವರ ದೊರೆಯಲಿದೆ. ಅಂತಹ ಸಂದರ್ಭದಲ್ಲಿ ದಂಡದ ಮೊತ್ತವನ್ನು ಸ್ಥಳದಲ್ಲಿಯೇ ಪಾವತಿಸಿ ನೋಟೀಸನ್ನು ಮುಕ್ತಾಯ ಮಾಡಲು ಅವಕಾಶ ನೀಡಲಾಗಿದೆ. ವಾಹನಗಳ ಮಾಲೀಕರು ತಮಗೆ ಎಸ್‌ಎಂಎಸ್ ಬಂದಾಗ ನೋಟೀಸಿನಲ್ಲಿ ನಮೂದಿಸಿರುವ ದಂಡವನ್ನು ಹತ್ತಿರದ ಸಂಚಾರಿ ಪೊಲೀಸ್ ಠಾಣೆಗೆ ಹೋಗಿ ಅಥವಾ ಕರ್ತವ್ಯನಿರತ ಸಂಚಾರಿ ಪೊಲೀಸ್ ಅಧಿಕಾರಿಗಳ ಬಳಿ ಹೋಗಿ ಕಟ್ಟಬಹುದಾಗಿದೆ ಎಂದರು.


ಈ ನೂತನ ವ್ಯವಸ್ಥೆಯು ಆ.೨೮ರಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ. ಆದ್ದರಿಂದ ವಾಹನ ಸವಾರರು ಯಾವುದೇ ಕಾರಣಕ್ಕೂ ನಿಯಮಗಳನ್ನು ಉಲ್ಲಂಘಿಸಬಾರದು. ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ನಗರದ ಪ್ರಮುಖ ೧೩ ಸಿಗ್ನಲ್ ವೃತ್ತಗಳಲ್ಲಿ ಬೇರೆ ಬೇರೆ ರೀತಿಯ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಾಗಾಗಿ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚಾರಿ ನಿಯಮಗಳನ್ನು ಪಾಲಿಸಿ ದಂಡ ಕಟ್ಟದಂತೆ ಜಾಗರೂಕರಾಗಿರಬೇಕು ಎಂದರು.


ದುರ್ಗಿಗುಡಿ ಸೇರಿದಂತೆ ಎಲ್ಲಾ ಏಕಮುಖ ರಸ್ತೆಯಲ್ಲಿ ಕೂಡ ಕ್ಯಾಮೆರಾ ಅಳವಡಿಸಲಾಗಿದೆ. ಅದರೆ ವಿರುದ್ಧ ದಿಕ್ಕಿನಿಂದ ಬಂದವರಿಗೆ ಕೂಡ ದಂಡ ವಿಧಿಸಲಾಗುವುದು.

By admin

ನಿಮ್ಮದೊಂದು ಉತ್ತರ

You missed

error: Content is protected !!