ಶಿವಮೊಗ್ಗ ಆ.18:

ನಾಟಕವೆಂದರೆ ಸಂತೋಷದಿಂದ ಮೆಲುಕು ಹಾಕುವ ಒಂದು ಸುಂದರವಾದ ರಂಗ ಕಲೆ ಎಂದು ಶಾಸಕ ಚನ್ನಬಸಪ್ಪ ಹೇಳಿದರು.
ಅವರು ಕಮಲಾ ನೆಹರು ಕಾಲೇಜಿನಲ್ಲಿ ನಡೆದ ಪ್ರೊಫೆಸರ್ ಗೌರಿಶಂಕರ ಅಭಿನಂದನಾ ಸಮಿತಿಯಲ್ಲಿ ಗೌರಿಶಂಕರ್ ನಾಟಕೋತ್ಸವದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಶಿವಮೊಗ್ಗ ಮೊದಲಿನಿಂದಲೂ ಕೂಡ ನಾಟಕ ಕಲೆಗೆ ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ತಾವು ಸ್ವತಹ ನಾಟಕದಲ್ಲಿ ಅಭಿನಯಿಸಿದ್ದು ಕಡಿಮೆಯಾದರೂ ಕೂಡ ಪ್ರತಿ ನಾಟಕದ ಹಿನ್ನೆಲೆಯಲ್ಲಿ ನಾವು ಅನೇಕ ಕೆಲಸವನ್ನು ಬಹಳ ಸಂತೋಷದಿಂದ ಮಾಡುತ್ತಿದ್ದೆವು. ಅಲ್ಲದೆ ನಾಟಕ ತಂಡವನ್ನು ಕಟ್ಟಿಕೊಂಡು ಸೈಕಲ್ನಲ್ಲಿ ಶಿವಮೊಗ್ಗದಿಂದ ಶೃಂಗೇರಿಗೆ ಪ್ರಯಾಣ ಮಾಡಿದ ನೆನಪು ಹಚ್ಚಹಸುರಾಗಿದೆ. ಎಂದರು.


ಹಿಂದೆ ನಾಟಕವನ್ನು ಸಂಪೂರ್ಣವಾಗಿ ಜನಗಳಿಂದ ಹಣವನ್ನು ಸಂಗ್ರಹಿಸಿ ಮಾಡಬೇಕಾಗಿತ್ತು. ಆದರೆ ಈಗ ಅನೇಕ ಸಂಘ ಸಂಸ್ಥೆಗಳು ನಾಟಕಕ್ಕೆ ಪ್ರೋತ್ಸಾಹಿಸುತ್ತಾ ಬಂದಿದೆ. ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಯು ದಸರಾ ರಂಗೋತ್ಸವವನ್ನು ಏರ್ಪಡಿಸಿ ಸಾಕಷ್ಟು ಪ್ರೋತ್ಸಾಹ ನೀಡುತ್ತಾ ಬಂದಿದೆ. ಅಲ್ಲದೆ ಹೆಚ್ ಎಂ ಪ್ರಭಾಕರ ರವರ ಹೆಸರಿನಲ್ಲಿ ನಾಟಕವನ್ನು ಆಡುವುದಕ್ಕೆ ಸ್ವಲ್ಪ ಹಣವನ್ನು ನಿಧಿಯಾಗಿ ಇಟ್ಟಿದ್ದೇವೆ. ಅದನ್ನು ಕೂಡ ಬಳಸಿಕೊಂಡು ನಾಟಕವನ್ನು ಆಡಬಹುದು. ಇಂದು ನಿರ್ದೇಶಕರಿಗೆ ನಿರ್ದೇಶನ ಮಾಡುವ ಸಾಮರ್ಥ್ಯವುಳ್ಳ ಯುವಕರು ತಯಾರಾಗುತ್ತಿದ್ದಾರೆ. ಈ ಬಾರಿ ಮಕ್ಕಳ ನಾಟಕ ಸ್ಪರ್ಧೆ ಮಾಡಿದಾಗ ಹಲವಾರು ತಂಡಗಳು ಪ್ರದರ್ಶನಕ್ಕೆ ಆಗಮಿಸಿದ್ದವು ಆ ಎಲ್ಲ ತಂಡಗಳಿಗೆ ಹಲವಾರು ಯುವಕರು ತರಬೇತಿಯನ್ನು ನೀಡಿದ್ದು ನೋಡಿದರೆ ನಾಟಕ ಕಲೆ ಪ್ರಬಲವಾಗಿ ಬೆಳೆಯುತ್ತಿದೆ ಎನಿಸುತ್ತದೆ ಶಿವಮೊಗ್ಗದಲ್ಲಿ ನಾಟಕೋತ್ಸವ ನಡೆಸುವುದಕ್ಕೆ ನನ್ನ ಪೂರ್ಣ ಸಹಕಾರವಿದೆ ಎಂದು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ಕಾಂತೇಶ್ ಮೂರ್ತಿಯವರು ಮಾತನಾಡಿ ಶಿವಮೊಗ್ಗದ ನಾಟಕ ತಂಡಗಳು ಬೆಂಗಳೂರಿನ ನಾಟಕ ತಂಡಗಳಿಗಿಂತ ಹೆಚ್ಚು ಉತ್ತಮವಾದ ನಾಟಕವನ್ನು ನೀಡುತ್ತಿದೆ ಎಂದು ಅನೇಕ ಜನ ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದರು.

1973 ರಲ್ಲಿ ಪ್ರಾರಂಭವಾದ ಅಭಿನಯ ತಂಡ ಅತ್ಯುತ್ತಮವಾದ ನಾಟಕವನ್ನು ಶಿವಮೊಗ್ಗದ ಜನತೆಗೆ ನೀಡಿದೆ. ಅಂಧಯುಗ ತದ್ರೂಪಿ ಹಯವದನ ಮುಂತಾದ ನಾಟಕವನ್ನು ಉದಾಹರಿಸಿದ ಅವರು ಅಂಧಯುಗ ನಾಟಕಕ್ಕೆ ಶಿವಮೊಗ್ಗದ ಡಿವಿಎಸ್ ರಂಗಮಂದಿರದಿಂದ ವೀರಭದ್ರ ಟಾಕೀಸ್ ವರೆಗೆ ಜನ ಕ್ಯೂ ನಿಂತು ಟಿಕೆಟ್ ಗಾಗಿ ಪರದಾಡುತ್ತಿದ್ದರು. ಆಗ ಹತ್ತು ರೂಪಾಯಿಗೆ ನಾಲ್ಕು ನಾಟಕಗಳನ್ನು ಜನರಿಗೆ ನೋಡಲು ಅವಕಾಶವಿತ್ತು. ಪ್ರತಿ ನಾಟಕವನ್ನು ಕೂಡ ಅಭಿನಯದವರು ಕನಿಷ್ಠ 10 ದಿನ ಮಾಡುತ್ತಿದ್ದರು. ದಿನಕ್ಕೆ ಒಂದೇ ಪ್ರದರ್ಶನವಿದ್ದು ಟಿಕೆಟ್ ಬೇಕಾದವರು ಸಂಜೆಯ ನಾಟಕಕ್ಕೆ ಮಧ್ಯಾಹ್ನವೇ ಬಂದು ಕ್ಯೂ ನಿಲ್ಲುತ್ತಿದ್ದರು ಎಂದರು.

ವೇದಿಕೆಯಲ್ಲಿ ಪ್ರೊ. ಗೌರಿಶಂಕರ್ ಪ್ರೊ.ಹಾಲೇಶ್ ಡಾ. ಕೆ ನಾಗಭೂಷಣ್ ಉಪಸ್ಥಿತರಿದ್ದರು.
ಡಾ.ಕೆ ಜಿ ವೆಂಕಟೇಶರವರು ನಿರೂಪಣೆ ಮತ್ತು ಸ್ವಾಗತವನ್ನು ಮಾಡಿದರೆ, ಡಾ.ಸತೀಶ್ ಸಾಸ್ವೇಹಳ್ಳಿ ಅವರು ವಂದನಾರ್ಪಣೆಯನ್ನು ಮಾಡಿದರು.

By admin

ನಿಮ್ಮದೊಂದು ಉತ್ತರ

error: Content is protected !!