ಶಿವಮೊಗ್ಗ: ನಗರದ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯಿಂದ ನಡೆಸುತ್ತಿರುವ ಪ್ರತಿಷ್ಠಿತ ಚುಂಚಾದ್ರಿಕಪ್ ವಾಲಿಬಾಲ್ ಪಂದ್ಯಾವಳಿಯನ್ನು ಆ.11ರಿಂದ 14ರ ವರೆಗೆ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಿ.ವಿ. ಸತೀಶ್ ಹೇಳಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಆದಿಚುಂಚನಗಿರಿ ವಿದ್ಯಾಸಂಸ್ಥೆಯು ಕಳೆದ 20ವರ್ಷಗಳಿಂದ ಚುಂಚಾದ್ರಿಕಪ್ ವಾಲಿಬಾಲ್ ಪಂದ್ಯಾವಳಿಯನ್ನು ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರಿಗಾಗಿ ಆಯೋಜಿಸುತ್ತಾ ಬಂದಿದೆ. ಈ ಬಾರಿಯೂ ಕೂಡ ಆ. 11ರಿಂದ 14ರ ವರೆಗೆ ಚುಂಚಾದ್ರಿ ಕಪ್ ವಾಲಿಬಾಲ್ ಸಂಭ್ರಮ ನಡೆಯಲಿದೆ ಎಂದರು.
ಈಗಾಗಲೇ ಜಿಲ್ಲೆಯ ಪ್ರೌಢಶಾಲಾ ಬಾಲಕರ ಸುಮಾರು 37 ತಂಡಗಳು ಬಾಲಕಿಯರ 20 ತಂಡಗಳು ಈಗಾಗಲೇ ಹೆಸರು ನೊಂದಾಯಿಸಿದ್ದು, ಬಾಲಕರ ಮತ್ತು ಬಾಲಕಿಯರ ವಿಭಾಗಕ್ಕೆ ಕ್ರಮವಾಗಿ 5000, 4000, 3000 ಹಾಗೂ 2000 ರೂ.ಗಳನ್ನು ನೀಡಲಾಗುವುದು. ಇದಲ್ಲದೆ ಅತ್ಯುತ್ತಮ ಆಟ ಪ್ರದರ್ಶಿಸಿದ ಆಟಗಾರರಿಗೆ ಬೆಸ್ಟ್ ಅಟ್ಯಾಕರ್, ಬೂಸ್ಟರ್, ಆಲ್‍ರೌಂಡರ್, ಬ್ಲಾಕರ್, ಬೆಸ್ಟ್ ಲೀಬ್ರೋ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು.
ಜಿಲ್ಲೆಯಿಂದ ಆಮಿಸುವ ಕ್ರೀಡಾ ಪಟುಗಳಿಗೆ ಊಟ ಮತ್ತು ವಸತಿ ಹಾಗೂ ಸಾರಿಗೆ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗುವುದು. ಆಟಗಾರರ ಅನುಕೂಲಕ್ಕೆ ನಾಲ್ಕು ಅಂಕಣಗಳನ್ನು ಸಿದ್ಧಪಡಿಸಲಾಗಿದೆ. ಹೊನಲು ಬೆಳಕಿನ ವಾಲಿಬಾಲ್ ಪಂದ್ಯವಿದು. ಜಿಲ್ಲಾ ವಾಲಿಬಾಲ್ ಸಂಸ್ಥೆಯ ಸಹಕಾರದೊಂದಿಗೆ ಈ ಪಂದ್ಯಾವಳಿ ನಡೆಯಲಿದೆ ಎಂದರು.
ಜಿಲ್ಲಾ ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆ ಗುರುತಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಪ್ರತಿ ವರ್ಷ ಈ ಕ್ರೀಡಾಕೂಟ ನಡೆಸುತ್ತಾ ಬಂದಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವವರಿಗೆ ಹಲವು ನಿಯಮಗಳನ್ನು ವಿಧಿಸಲಾಗಿದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದ ನುರಿತ ತೀರ್ಪುಗಾರರು ಇದರಲ್ಲಿ ಭಾಗವಹಿಸುತ್ತಾರೆ ಎಂದರು.
ಭಾಸ್ಕರ್ ಜಿ. ಕಾಮತ್ ಮಾತನಾಡಿ, ಇದರ ಉದ್ಘಾಟನಾ ಸಮಾರಂಭ ಆ. 11ರ ಸಂಜೆ 6-30ಕ್ಕೆ ನಡೆಯಲಿದೆ. ಈ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಡಾ. ನಿರ್ಮಲಾನಂದ ಮಹಾಸ್ವಾಮಿ, ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಪಾಲಿಕೆ ಆಯುಕ್ತ ಹಾಗೂ ಶಿಕ್ಷಣ ಸಂಸ್ಥೆಯಮುಖ್ಯಸ್ಥರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ ಆ. 14ರ ಸಂಜೆ 6-30ಕ್ಕೆ ನಡೆಯಲಿದ್ದು, ಬಹುಮಾನ ವಿತರಣೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಡುವರು. ಸಂಸದ ಬಿ.ವೈ. ರಾಘವೇಂದ್ರ ಹಾಗೂ ಜಿಲ್ಲೆಯ ಶಾಸಕರು ಭಾಗವಹಿಸುವರು ಎಂದರು.
ರಸ್ತೆ ಓಟ ಸ್ಪರ್ಧೆ: ಆ. 14 ರ ಬೆಳಿಗ್ಗೆ 6-30ಕ್ಕೆ ರಸ್ತೆ ಓಟದ ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದೆ. 14 ವರ್ಷದ ಬಾಲಕಿಯರಿಗೆ, 14 ವರ್ಷದ ಬಾಲಕರು ಮತ್ತು 17 ವರ್ಷದ ಬಾಲಕಿಯರಿಗೆ ಹಾಗೂ 17 ವರ್ಷದ ಬಾಲಕರ ವಿಭಾಗಕ್ಕೆ ನೆಹರೂ ಸ್ಟೇಡಿಯಂನಿಂದ ಆದಿಚುಂಚನಗಿರಿ ಮಠದ ವರೆಗೆ ವಿವಿಧ ಮಾರ್ಗಗಳ ಮೂಲಕ ಓಟದ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗೋವಿಂದರಾಜು, ಮೇಘರಾಜು, ಸುಜಾತಾ, ಹೇಮಾ, ವಾಸಪ್ಪ ಗೌಡರು ಮುಂತಾದವರಿದ್ದರು.