ಸಾಗರ : ನಿರ್ಭೀತಿಯಿಂದ ಬರೆಯುವ ಹಕ್ಕು ನಿಮಗೆ ಇದೆ. ವಸ್ತುನಿಷ್ಟವಾಗಿ ವರದಿ ಮಾಡುವ ಮೂಲಕ ಸಮಾಜದ ಕಣ್ಣು ತೆರೆಸುವ ಪ್ರಯತ್ನ ಪತ್ರಕರ್ತರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು
.
ಇಲ್ಲಿನ ಸ್ತ್ರೀಶಕ್ತಿ ಸಭಾಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರು, ಪತ್ರಿಕಾ ವಿತರಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಜೊತೆಗೆ ಪತ್ರಿಕಾ ರಂಗ ಸಹ ಸಮಾಜದ ನಾಲ್ಕನೇ ಪ್ರಮುಖ ಅಂಗವಾಗಿ ಗುರುತಿಸಿಕೊಂಡಿದೆ. ನನ್ನನ್ನು ಸೇರಿದಂತೆ ಯಾರೇ ತಪ್ಪು ಮಾಡಿದರೆ ಅವರನ್ನು ಎಚ್ಚರಿಸುವ ಹರಿತವಾದ ಲೇಖನಿ ನಿಮ್ಮ ಬಳಿ ಇರುತ್ತದೆ. ನಿಮ್ಮ ವರದಿಯಿಂದ ತಿದ್ದಿಕೊಂಡು ಅಭಿವೃದ್ದಿ ಪಥದತ್ತ ಹೆಜ್ಜೆ ಹಾಕಲು ಸಾಧ್ಯವಾಗುತ್ತದೆ. ನಿಮ್ಮ ನಿರ್ಭೀತಿಯ ಪತ್ರಿಕೋದ್ಯಮಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ನಿಮ್ಮ ವರದಿಯಿಂದ ಸಮಾಜ ಬದಲಾವಣೆ ಮಾಡಲು ಸಾಧ್ಯವಿದ್ದು, ನಿಮಗೆ ಯಾರೇ ಹೆದರಿಸುವ ಪ್ರಯತ್ನ ನಡೆಸಿದರೆ ನನ್ನ ಗಮನಕ್ಕೆ ತನ್ನಿ ಎಂದು ಹೇಳಿದರು.
ಬದಲಾದ ದಿನಮಾನಗಳಲ್ಲಿ ಡಿಜಿಟಲ್ ಮಾಧ್ಯಮಗಳ ಪ್ರವೇಶದಿಂದ ಸಮಸ್ಯೆಗಳು ತಕ್ಷಣ ಎಲ್ಲರ ಗಮನಕ್ಕೆ ಬರುತ್ತಿದೆ. ಇದರಿಂದ ತಕ್ಷಣ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗುತ್ತಿದೆ. ಪತ್ರಕರ್ತರಿಗೆ ನೊಂದ ಜನರ ಬಗ್ಗೆ ಕಾಳಜಿ ಇರಬೇಕು. ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಪತ್ರಕರ್ತರ ಸಹಕಾರ ಅಗತ್ಯ ಎಂದು ತಿಳಿಸಿದರು.
ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್ ಮಾತನಾಡಿ,
ಮೈಸೂರು, ಮಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ ಸಹ ಪತ್ರಿಕಾ ರಂಗದಲ್ಲಿ ತನ್ನದೆ ಗಾಂಭೀರ್ಯತೆ ಕಾಪಾಡಿಕೊಂಡು ಬರುತ್ತಿದೆ. ಸಾಗರ ತಾಲ್ಲೂಕಿನ ಪತ್ರಕರ್ತರು ಸಹ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಕರ್ತರಿಗೆ ಬಸ್ ಪಾಸ್, ಉಚಿತ ಆರೋಗ್ಯ ವಿಮೆ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಟಿ.ಎಂ.ಶಿವಕುಮಾರ್ ಗೌಡ, ರಾಘವೇಂದ್ರ ಶರ್ಮ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದೀಪಕ್ ಸಾಗರ್, ಪತ್ರಿಕಾ ವಿತರಕ ಅಬ್ದುಲ್ ಬಶೀರ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಜಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಂತೋಷಕುಮಾರ್, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಟಿ.ಅರುಣ್, ಸೋಮನಾಥ್, ತಾಲ್ಲೂಕು ಸಂಘದ ಉಪಾಧ್ಯಕ್ಷ ಲೋಕೇಶಕುಮಾರ್ ಇನ್ನಿತರರು ಉಪಸ್ಥಿತರಿದ್ದರು. ಎಂ.ಜಿ.ರಾಘವನ್ ಸ್ವಾಗತಿಸಿದರು. ಮಹೇಶ್ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಸಂತೋಷಕುಮಾರ್ ವಂದಿಸಿದರು.