ಶಿವಮೊಗ್ಗ: ಉಡುಪಿಯ ನರ್ಸಿಂಗ್ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳ ಸ್ನಾನದ ದೃಶ್ಯಗಳನ್ನು ಚಿತ್ರೀಕರಣ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ಶಿವಮೊಗ್ಗ ನಗರ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರಕರಣದಲ್ಲಿ ಅನ್ಯ ಕೋಮಿನ ವಿದ್ಯಾರ್ಥಿನಿಯರಾದ ಶಬನಾಝ್, ಅಲ್ಫಿಯಾ ಮತ್ತು ಆಲೀಮಾ ಆರೋಪಿಗಳಾಗಿರುವುದರಿಂದ ಈ ಪ್ರಕರಣವನ್ನು ಅಲ್ಲಿಯೇ ಮುಚ್ಚಿಹಾಕಿ ಅವರನ್ನು ರಕ್ಷಿಸಲು ರಾಜ್ಯಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಪ್ರಕರಣದ ಬಗ್ಗೆ ಧ್ವನಿ ಎತ್ತಿದ ಮಹಿಳಾ ಹಕ್ಕುಗಳ ಹೋರಾಟಗಾರ್ತಿರಶ್ಮಿ
ಸಾವಂತ್ ಅವರ ಮನೆಗೆ ಪೊಲೀಸರನ್ನು ಕಳುಹಿಸಿ ಅವರನ್ನು ಸುಮ್ಮನಿರಿಸಲು ಪ್ರಯತ್ನಿಸಿರುವುದು ಪ್ರಕರಣಕ್ಕೆ ಜಿಹಾದಿ ನಂಟು ಇರಬಹುದೆಂದು ಅನುಮಾನ ವ್ಯಕ್ತವಾಗುತ್ತಿದೆ. ಈಕೃತ್ಯದಿಂದ ಹಿಂದೂ ಯುವತಿಯರು ಶೋಷಣೆಗೊಳಗಾಗಿದ್ದಾರೆ. ದೇಶದಲ್ಲಿ ಮಹಿಳೆಯರಿಗೆ ಮಹಿಳೆಯರಿಗೆ ತಾಯಿತನದ ಗೌರವವಿದ್ದು, ಈ ಮುಸ್ಲಿಂ ವಿದ್ಯಾರ್ಥಿನಿಯರು ಮಾಡಿರುವ ಹೀನಾಯ ಕೃತ್ಯದಿಂದ ಮಹಿಳಾ ಸಂಕುಲವೇ ತಲೆ ತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರೀಕರಣ ಮಾಡಿರುವ ವೀಡಿಯೋವನ್ನು ಮುಸ್ಲಿಂ ಯುವಕರಿಗೆ ನೀಡಿರುವುದು ಬೆಳಕಿಗೆ ಬಂದಿದೆ. ಇದರ ಒಳಸಂಚು ಏನು ಎಂಬುದನ್ನು ಸಂಪೂರ್ಣ ತನಿಖೆ ಮಾಡಬೇಕು. ಈಗಾಗಲೇ ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಹಾಕಿರುವ
ಎಫ್ಐಆರ್ ಅನ್ನು ಒತ್ತಡದಿಂದಷ್ಟೆ ಹಾಕಲಾಗಿದೆ. ಯಾವುದೇ ರಾಜಕಾರಣಿಗಳ, ಧಾರ್ಮಿಕ ಮುಖಂಡರ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರು ಮತ್ತು ಪ್ರಕರಣದ ಹಿಂದಿರುವ ಕಾಣದ ಕೈಗಳು ಯಾವುವು ಎಂಬುದನ್ನು ಪತ್ತೆ ಹಚ್ಚಿ ಪ್ರಕರಣದಲ್ಲಿ ಭಾಗಿಯಾದ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ನಗರಾಧ್ಯಕ್ಷೆ ಸುರೇಖಾ ಮುರಳೀಧರ್, ಪ್ರಧಾನ ಕಾರ್ಯದರ್ಶಿ ರಶ್ಮಿ, ನಗರಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಧಾನ ಕಾರ್ಯದರ್ಶಿಗಳಾದ ಡಿ. ಮೋಹನ್ ರೆಡ್ಡಿ, ಸಂತೋಷ್ ಬಳ್ಳೇಕೆರೆ, ಪ್ರಮುಖರಾದ ಎಸ್.ದತ್ತಾತ್ರಿ, ನಾಗರಾಜ್, ಸೀತಾಲಕ್ಷ್ಮಿ, ಮೀನಾಕ್ಷಿ ಸುಬ್ರಹ್ಮಣ್ಯ, ಸುಮಿತ್ರಾ, ಮಂಗಳಾ,ಮಂಜುಳಾ, ಮಾಲತೇಶ್, ಬಾಲು ಇನ್ನಿತರರು ಪಾಲ್ಗೊಂಡಿದ್ದರು.