ಶಿವಮೊಗ್ಗ: ಹಕ್ಕುಪತ್ರ ನೀಡಲು ಆಗ್ರಹಿಸಿ ನಾಗರಬಾವಿ ಗ್ರಾಮದ ನಿವಾಸಿಗಳು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ವಿಷ ಕುಡಿಯುವ ಎಚ್ಚರಿಕೆ ನೀಡಿದರು.


ಹಾರನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ನಾಗರಬಾವಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ನಾವು ವಾಸಿಸುತ್ತಿದ್ದೇವೆ. ಅದರೆ ಈಗ ನಾವು ವಾಸಿಸುವ ಜಾಗವನ್ನು ಖಾಸಗೀದಾರರು ತಮ್ಮ ಜಾಗವೆಂದು ಹೇಳಿ ಒಕ್ಕಲೆಬ್ಬಿಸಲು ಹೊರಟಿದ್ದಾರೆ. ಸರ್ವೆ ಇಲಾಖೆಯವರು ಕೂಡ ಈಗಾಗಲೇ ವರದಿ ಸಲ್ಲಿಸಿದ್ದಾರೆ. ಕರ್ನಾಟಕ ಭೂ ಸುಧಾರಣೆ ಕಾಯಿದೆ ಅನ್ವಯ ತಹಸೀಲ್ದಾರರಿಗೆ ನಾವು ಅರ್ಜಿಯನ್ನು ಕೂಡ ಸಲ್ಲಿಸಿದ್ದೇವೆ. ಆದರೆ ನಮ್ಮ ಅರ್ಜಿಯನ್ನು ಪರಿಗಣಿಸಿಲ್ಲ ಎಂದು ಮನವಿದಾರರು ದೂರಿದರು.


೧೫೦ ವರ್ಷಗಳ ಹಿಂದನಿಂದ ಅನುಭವಿಸಿಕೊಂಡು ಬಂದಿರುವ ಜನವಸತಿ ಪ್ರದೇಶದ ಜಾಗದ ಮೇಲೆ ಅನಧಿಕೃತ ಪಹಣಿ ಹೊಂದಿರುವ ಜಯಲಕ್ಷ್ಮಮ್ಮ, ಶಾಹಿದಾ ಭಾನು, ರಫಿಕ್ ಅಹ್ಮದ್ ಇವರು ಒಕ್ಕಲೆಬ್ಬಸಿದ್ದಾರೆ.ಆದ್ದರಿಂದ ನಮ್ಮನ್ನು ರಕ್ಷಣೆ ಮಾಡಬೇಕು ಮತ್ತು ಕಾನೂನುಬದ್ಧವಾಗಿ ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ನಾವು ವಾಸಿಸುತ್ತಿರುವ ಮನೆಗಳನ್ನು ಗೂಂಡಾ ವರ್ತನೆಯ ಮೂಲಕ ಯಾವ ಸಂದರ್ಭದಲ್ಲಾದರೂ ಒಡೆದುಹಾಕಬಹುದಾಗಿದೆ. ನಮ್ಮ ಮೇಲೆ ದೌರ್ಜನ್ಯ ಎಸಗದಂತೆ ಸೂಕ್ತ ಕಾನೂನು ರೀತಿಯಲ್ಲಿ ನಾವಿರುವ ಜಾಗವನ್ನು ನಾಗರಬಾವಿ ಗ್ರಾಮ, ಹಾರನಹಳ್ಳಿ ಹೋಬಳಿ ಸರ್ಕಾರಿ ಪಡೆ ಎಂದು ನಮೂದಿಸಬೇಕು. ಇಲ್ಲದಿದ್ದಲ್ಲಿ ನಾವು ವಿಷ ಕುಡಿಯುತ್ತೇವೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.


ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಕ್ರಿಮಿನಾಶಕ ತಂದು ಸೇವಿಸಲು ಮುಂದಾದಾಗ ಪೊಲೀಸರು ಆತನನ್ನು ತಡೆದು ಕ್ರಿಮಿನಾಶಕ ವಶಪಡಿಸಿಕೊಂಡ ಘಟನೆಯೂ ನಡೆಯಿತು.
ಈ ಸಂದರ್ಭದಲ್ಲಿ ರಿಯಾಜ್, ಉಬೇದುಲ್ಲಾ, ಹ್ಯಾಪಿಜಾಬಿ, ಶಬ್ಬೀರ್, ಸಿರಿಜಾನ್, ಮುನೀರ್, ಸನಾವುಲ್ಲಾ, ಶಬ್ಬೀರ್ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!