*ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವ ಟ್ರೇಡ್ ಮೇಳ*
ಶಿವಮೊಗ್ಗ: ನಗರದ ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವುದು ಹಾಗೂ ವ್ಯಾಪಾರದ ಲೈಸೆನ್ಸ್ ಪ್ರಕ್ರಿಯೆ ಸುಲಭಗೊಳಿಸುವ ಆಶಯದಿಂದ ಮೇಳ ಆಯೋಜಿಸಿದ್ದು, ಶಿವಮೊಗ್ಗ ನಗರದ ಉದ್ಯಮಿಗಳು ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದಲ್ಲಿ ಮೂರನೇ ಬಾರಿ ಆಯೋಜಿಸಿದ್ದ “ಟ್ರೇಡ್ ಲೈಸೆನ್ಸ್ ಮೇಳ” ಉದ್ಘಾಟಿಸಿ ಮಾತನಾಡಿ, ಲೈಸೆನ್ಸ್ ಪಡೆಯಲು ಉದ್ಯಮಿಗಳಿಗೆ ಆಗುವ ತೊಂದರೆಗಳನ್ನು ಪರಿಹರಿಸುವ ಆಶಯದಿಂದ ಮೇಳ ನಡೆಸುತ್ತಿದ್ದು, ದಾಖಲೆಗಳ ಜತೆಯಲ್ಲಿ ಅರ್ಜಿ ಸಲ್ಲಿಸಿ ಕೂಡಲೇ ಲೈಸೆನ್ಸ್ ಪಡೆಯಬೇಕು. ಇದರಿಂದ ಉದ್ಯಮಿಗಳಿಗೆ ಸಮಯ ಉಳಿತಾಯವಾಗಲಿದೆ ಎಂದು ತಿಳಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆ ಎಇಇ ಅಮೋಘ್ ಮಾತನಾಡಿ, ಏಕಬಳಕೆಯ ಪ್ಲಾಸ್ಟಿಕ್ ಎಲ್ಲ ಕಡೆಗಳಲ್ಲಿ ನಿಷೇಧ ಮಾಡಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಸಾರ್ವಜನಿಕರು ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡಬಾರದು. ನಿಷೇಧಿತ ಪ್ಲಾಸ್ಟಿಕ್ ಬಳಸಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್ ಮಾತನಾಡಿ, ಎರಡು ದಿನಗಳ ಕಾಲ ಟ್ರೇಡ್ ಲೈಸೆನ್ಸ್ ಮೇಳ ನಡೆಯುತ್ತಿದ್ದು, ವ್ಯಾಪಾರ ವಹಿವಾಟು ನಡೆಸುವವರು ಲೈಸೆನ್ಸ್ ಪಡೆದುಕೊಳ್ಳಬೇಕು. ಕಳೆದ ಸಾಲಿನಲ್ಲಿ ಸಾವಿರಕ್ಕೂ ಅಧಿಕ ವ್ಯಾಪಾರಸ್ಥರು ಮೇಳದ ಪ್ರಯೋಜನ ಪಡೆದಿದ್ದರು. ಪಾಲಿಕೆ ಸಹಯೋಗದಲ್ಲಿ ನಡೆಯುತ್ತಿರುವ ಮೇಳದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪಾಲಿಕೆ ಅಧಿಕಾರಿಗಳು, ಆರೋಗ್ಯ ನೀರಿಕ್ಷಕರು ಹಾಗೂ ಸಿಬ್ಬಂದಿ ಸ್ಥಳದಲ್ಲಿಯೇ ಅರ್ಜಿದಾರರಿಂದ ದಾಖಲೆಗಳನ್ನು ಪಡೆದುಕೊಂಡು ಪರಿಶೀಲಿಸಿ ಲೈಸೆನ್ಸ್ ನೀಡುವ ಕೆಲಸ ಮಾಡುತ್ತಿದ್ದಾರೆ. ಎರಡು ದಿನ ( ಮಂಗಳವಾರ ಮತ್ತು ಬುಧವಾರ ) ನಡೆಯುವ ಮೇಳದ ಸದುಪಯೋಗ ವ್ಯಾಪಾರಸ್ಥರು ಪಡೆದುಕೊಳ್ಳುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ನಿರ್ದೇಶಕರಾದ ಗಣೇಶ್ ಅಂಗಡಿ, ಮಂಜೇಗೌಡ, ಜವಳಿ ವರ್ತಕರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್, ಕಾರ್ಯದರ್ಶಿ ಪ್ರಭಾಕರ್, ಪಾಲಿಕೆ ಆರೋಗ್ಯ ನೀರಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.