ಸಾಗರ : ಆಸ್ಪತ್ರೆಗೆ ಬಂದರೆ ಸಾರ್ವಜನಿಕರಿಗೆ ಕಿರಿಕಿರಿ, ಗಬ್ಬು ವಾಸನೆ ಬರಬಾರದು. ಉತ್ತಮ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ತಾಯಿಮಗು ಆಸ್ಪತ್ರೆ ಆವರಣವನ್ನು ಪರಿವರ್ತನೆ ಮಾಡಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು
.
ಇಲ್ಲಿನ ತಾಯಿಮಗು ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಆಸ್ಪತ್ರೆಗೆ ಅಭಿವೃದ್ದಿಗೆ ಬಂದಿರುವ ಅನುದಾನದಲ್ಲಿ ಊಟದ ಹಾಲ್, ಕ್ಯಾಂಟಿನ್, ಪಾರ್ಕಿಂಗ್, ಉದ್ಯಾನವನ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಗಮನ ಹರಿಸಲಾಗಿದೆ ಎಂದು ಹೇಳಿದರು.
ತಾಯಿಮಗು ಆಸ್ಪತ್ರೆ ೬೦ ಹಾಸಿಗೆ ಸಾಮರ್ಥ್ಯ ಇದ್ದಿದ್ದನ್ನು ೧೦೦ ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಅದನ್ನು ಶೀಘ್ರ ಪೂರೈಸಿ ರೋಗಿಗಳಿಗೆ ಅನುಕೂಲವಾಗುವಂತೆ ಬಿಟ್ಟುಕೊಡಲು ಸೂಚನೆ ನೀಡಲಾಗಿದೆ. ಆಸ್ಪತ್ರೆ ವಾತಾವರಣ ಕೆಟ್ಟದ್ದಾಗಿದ್ದು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಬಂದು ಹೋಗುವ ಸ್ಥಿತಿ ಇದೆ. ತಕ್ಷಣ ಇದನ್ನು ಸರಿಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಬೇಳೂರು, ಬರುವ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ತಿಳಿಸಿದರು.
ಈ ಸಂದರ್ಭದಲ್ಲಿ ಸಿವಿಲ್ ಸರ್ಜನ್ ಡಾ. ಕೆ.ಪರಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮೋಹನ್ ಕೆ.ಎಸ್., ಪ್ರಮುಖರಾದ ವೈ.ಮೋಹನ್, ಟಿ.ಪಿ.ರಮೇಶ್, ಚೇತನರಾಜ್ ಕಣ್ಣೂರು, ಅಶೋಕ್ ಬೇಳೂರು, ಬಸವರಾಜ, ಮನೋಜ್ ಕುಗ್ವೆ ಇನ್ನಿತರರು ಹಾಜರಿದ್ದರು.