ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವವನ್ನು ಬೆಳೆಸಿ
ವೃತ್ತ್ತಿಪರ ಕೋರ್ಸುಗಳಿಗೆ ಮಾರ್ಗದರ್ಶನ ಕಾರ್‍ಯಕ್ರಮ ಉದ್ಘಾಟಿಸಿದ ಡಾ|| ಧನಂಜಯ ಸರ್ಜಿ ಅಭಿಪ್ರಾಯ
ಶಿವಮೊಗ್ಗ,ಜೂ.19:
ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವವನ್ನು ಬೆಳೆಸಿ, ಪ್ರೋತ್ಸಾಹಿಸಿದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ನಗರದ ಸರ್ಜಿ ಫೌಂಡೇಶನ್ ಮುಖ್ಯಸ್ಥ ಡಾ|| ಧನಂಜಯ ಸರ್ಜಿ ಅಭಿಪ್ರಾಯಪಟ್ಟರು.
ಪ್ರಗತಿ ಆಪಲ್ ಎಜುಕೇಶನ್ ಸಂಸ್ಥೆಯವರು ಚೇಂಬರ್ ಆಫ್ ಕಾಮರ್ಸ್ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ‘ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ವೃತ್ತ್ತಿಪರ ಕೋರ್ಸುಗಳಿಗೆ ಮಾರ್ಗದರ್ಶನ ಮತ್ತು ಉಪನ್ಯಾಸ’ ಕಾರ್‍ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಕಾರಾತ್ಮಕ ಚಿಂತನೆ ನಮ್ಮಲ್ಲಿದ್ದರೆ ಎಂತಹ ಸನ್ನಿವೇಶವನ್ನಾದರೂ ಎದುರಿಸಲು ಸಾಧ್ಯ. ಎಲ್ಲಾ ಕಾಲದಲ್ಲೂ ಅದು ನಮ್ಮನ್ನು ರಕ್ಷಿಸುತ್ತದೆ. ವಿಜ್ಞಾನಿಗಳಾದ ಸ್ಟೀಫನ್ ಹಾಕಿಂಗ್, ಥಾಮಸ್ ಅಲ್ವಾ ಎಡಿಸನ್ ಮತ್ತು ದಿವಂಗತ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಉದಾಹರಣೆ ನೀಡಿದ ಅವರು, ಈ ಮೂವರೂ ವಿಜ್ಞಾನಿಗಳು ಜೀವನದಲ್ಲಿ ಎಂತೆಂತಹ ಸಂದರ್ಭ ಎದುರಿಸಿ ಮೇಲಕ್ಕೇರಿದ್ದಾರೆ. ತಾವು ಸಂಶೋಧನೆ ಮಾಡುವಾಗ ಹಲವು ಬಾರಿ ವೈಫಲ್ಯ ಅನುಭವಿಸಿದರೂ ಎದೆಗುಂದದೆ ತಮ್ಮ ಚಿಂತನೆ ಮತ್ತು ಸಕಾರಾತ್ಮಕ ಮನೋಭಾವದಿಂದಲೇ ಸಾಧನೆ ಮಾಡಿದರು. ಕಲಾಂ ಸಹ ಜೀವನದಲ್ಲಿ ಉನ್ನತ ಹುದ್ದೆ ಪಡೆಯಲು, ಸಾಧನೆ ಮಾಡಲು ಸಾಧ್ಯವಾಯಿತು ಎಂದರು.
ಜೀವನದಲ್ಲಿ ಉನ್ನತ ಚಿಂತನೆಯ ಜೊತೆಗೆ ಮಹತ್ತರ ಕನಸಿರಬೇಕು. ಅದನ್ನು ಸಾಧಿಸುವ ಛಲ ಬೇಕು. ನಿರ್ದಿಷ್ಟ ದಿಕ್ಕಿನಲ್ಲಿ ಯೋಚನೆ ಮಾಡುವ, ನಿರ್ದಿಷ್ಟ ಛಲ ಬೆಳೆಸಿಕೊಳ್ಳಬೇಕು. ಮತ್ತು ಸಮರ್ಪಣಾ ಮನೋಭಾವವಿರಬೇಕು ಎಂದ ಡಾ|| ಸರ್ಜಿ, ಸತತ ಮತ್ತು ನಿರಂತರ ಪ್ರಯತ್ನ ಮನುಷ್ಯನ್ನು ಸಾಧನೆಯ ಹಾದಿಯಲ್ಲಿ ಕರೆದೊಯ್ಯುತ್ತದೆ ಎಂದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್. ಗೋಪಿನಾಥ ಮಾತನಾಡಿ, ಎಲ್ಲ ರಂಗಗಳಲ್ಲೂ ಸಾಧನೆಗೆ ಕೌಶಲ್ಯ ಅತಿ ಮುಖ್ಯ. ವಿಜ್ಞಾನವಿರಲಿ, ಕೈಗಾರಿಕೆ ಇರಲಿ, ಇಂಜಿನಿಯರಿಂಗ್ ಇರಲಿ, ನಾವು ಕಲಿತಿದ್ದಕ್ಕೂ, ಕೆಲಸ ಮಾಡುವುದಕ್ಕ್ಕೂ ವ್ಯತ್ಯಾಸವಿದೆ. ಈ ಅಂತರವನ್ನು ನಿವಾರಿಸಲು ಚೇಂಬರ್ ಆಫ್ ಕಾಮರ್ಸ್ ಕೌಶಲ್ಯ ಅಕಾಡೆಮಿಯನ್ನು ತೆರೆಯುತ್ತಿದೆ. ಇದರಿಂದ ಹೆಚ್ಚಿನ ಸಾಧನೆ ಸಾಧ್ಯವಾಗುತ್ತದೆ. ಇಂದಿನ ಯುವಕರಲ್ಲಿ ಅಥವಾ ವಿದ್ಯಾವಂತರಲ್ಲಿ ಕೌಶಲ್ಯ ತುಂಬಾ ಕಡಿಮೆ. ಕೌಶಲ್ಯವಿಲ್ಲದಿದ್ದರೆ ಯಶಸ್ವಿ ಸಾಧನೆ ಸಾಧ್ಯವಾಗುವುದಿಲ್ಲ ಎಂದರು.
ಪ್ರಾಸ್ತಾವಿಕ ಮಾತನಾಡಿದ ಪ್ರಗತಿ ಆಪಲ್ ಎಜುಕೇಶನ್ ವಿಜಯಕುಮಾರ್ ಬಳಿಗಾರ್, ತಮ್ಮ ಸಂಸ್ಥೆ ವಿದ್ಯಾರ್ಥಿಗಳಿಗೆ ಸತತ ಮಾರ್ಗದರ್ಶನ ಮಾಡುತ್ತಿದೆ. ಪಿಯು ಪಾಸಾದ ನಂತರ ಮುಂದೇನು ಎಂದು ಚಿಂತಿಸುವವರಿಗೆ ಸಹಾಯ ಮಾಡುತ್ತಿದೆ. ಯಾವ್ಯಾವ ಕೋರ್ಸುಗಳು, ಕಾಲೇಜುಗಳು, ಶುಲ್ಕ ಸಹಿತ ಎಲ್ಲಾ ವಿವರಗಳನ್ನು ನೀಡುತ್ತಿದೆ. ಜೊತೆಗೆ ಸಾಕಷ್ಟು ಸ್ಕಾಲರ್‌ಶಿಪ್ ಗಳಿದ್ದು ಅವುಗಳನ್ನು ಕೊಡಿಸುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸುಮಾರು ೩ ಕೋಟಿ ರೂ. ಗೂ ಹೆಚ್ಚಿನ ಸ್ಕಾಲರ್‌ಶಿಪ್ ನ್ನು ಕಳೆದ ಸಾಲಿನಲ್ಲಿ ತಮ್ಮ ಸಂಸ್ಥೆ ಕೊಡಿಸಿದೆ. ಈ ರೀತಿ ಮಾರ್ಗದರ್ಶನ ಮತ್ತು ಸ್ಕಾಲರ್‌ಶಿಪ್ ಕೊಡಿಸುವ ರಾಜ್ಯದ
ಏಕೈಕ ಸಂಸ್ಥೆ ತಮ್ಮದು ಎಂದು ವಿವರಿಸಿದರು.
ವೇದಿಕೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಪ್ರಗತಿ ಆಪಲ್ ಎಜುಕೇಶನ್ ಅಧ್ಯಕ್ಷ ಹರ್ಷವಧನ ಶೀಲವಂತ ಮತ್ತು ಚೇಂಬರ್ ಆಫ್ ಕಾಮರ್ಸ್‌ನ ಸಹ ಕಾರ್ಯದರ್ಶಿ ಜಿ ವಿಜಯಕುಮಾರ್ ನಿರ್ದೇಶಕ ಗಣೇಶ ಆಂಗಡಿ ಉಪಸ್ಥಿತರಿದ್ದರು.
…………………………