*ಶಿವಮೊಗ್ಗ,
      ಜೂನ್ 21 ರಂದು ಜಿಲ್ಲಾ ಮಟ್ಟದಲ್ಲಿ ಮತ್ತು ಆಯುಷ್ ಇಲಾಖೆ ವತಿಯಿಂದ ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಅಧಿಕಾರಿಗಳಿಗೆ ತಿಳಿಸಿದರು.


    ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ಚರ್ಚಿಸಲು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


   ಸರ್ಕಾರದ ಮಾರ್ಗಸೂಚಿಯನ್ವಯ ಕಾರ್ಯಕ್ರಮದ ಸ್ಥಳವನ್ನು ನಿಗದಿಪಡಿಸಿ, ಯೋಗ ದಿನಕ್ಕೆ ಅಗತ್ಯವಾದ ಎಲ್ಲ ರೀತಿಯ ಮೂಲಸೌಕರ್ಯಗಳ ವ್ಯವಸ್ಥೆಯನ್ನು ಮಾಡಿಕೊಂಡು ನಿರ್ವಹಿಸುವಂತೆ ಅವರು ಸೂಚನೆ ನೀಡಿದರು.


     ಜಿಲ್ಲಾ ಆಯುಷ್ ಅಧಿಕಾರಿ ಡಾ.ಎ.ಎಸ್ ಪುಷ್ಪ ಮಾತನಾಡಿ, ಆಯುಷ್ ಇಲಾಖೆ ವತಿಯಿಂದ ಕೆಎಸ್‍ಆರ್‍ಪಿ, ಮಾಚೇನಹಳ್ಳಿ ಇಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 19 ರಂದು ಬೆಳಿಗ್ಗೆ 10 ಗಂಟೆಗೆ ಆಯುರ್ವೇದ ಕಾಲೇಜು ಮತ್ತು ಬೋಧನಾ ಆಸ್ಪತ್ರೆ ಅಧಿಕಾರಿ, ವೈದ್ಯರು ಸಿಬ್ಬಂದಿ, ವಿದ್ಯಾರ್ಥಿಗಳು, ಯೋಗಸಂಸ್ಥೆಗಳು ಸೇರಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತೆ ಶಿವಮೊಗ್ಗ, ಸಾಗರ ರಸ್ತೆ ಇಲ್ಲಿಂದ ಅಶೋಕ ವೃತ್ತದವರೆಗೆ ಯೋಗ ಜಾಥಾ ನಡೆಸಲಾಗುವುದು.
     ಯೋಗ ದಿನಾಚರಣೆ ಪ್ರಯುಕ್ತ ಈಗಾಗಲೇ ಶಾಲಾ-ಕಾಲೇಜು, ಚಿಕಿತ್ಸಾಲಯಗಳು, ಅಂಗನವಾಡಿಗಳಲ್ಲಿ ಕಾಮನ್ ಯೋಗ ಪ್ರೊಟೊಕಾಲ್ ಪ್ರಕಾರ ಯೋಗಾಭ್ಯಾಸ ಮಾಡಿಸಲಾಗುತ್ತಿದೆ. ಹಾಗೂ ಸರ್ಕಾರಿ ಕಚೇರಿಗಳಲ್ಲಿ ವೈ-ಬ್ರೇಕ್ ಅಟ್ ವರ್ಕ್‍ಪ್ಲೇಸ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.


     ಯೋಗ ದಿನಾಚರಣೆಯಂದು ಬೆಳಿಗ್ಗೆ 6.30 ಕ್ಕೆ ಎಲ್ಲರೂ ಒಂದೆಡೆ ಸೇರಲಾಗುವುದು. ಬೆಳಿಗ್ಗೆ 6.45 ರಿಂದ 7 ಗಂಟೆವರೆಗೆ ಯೋಗ ಗೀತೆ, ಬೆಳಿಗ್ಗೆ 7 ರಿಂದ 7.45 ರವರೆಗೆ ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಯೋಗ ಪ್ರದರ್ಶನ, 8 ರಿಂದ 8.30 ರವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ವಿವರ ನೀಡಿದರು.


      ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಮಾತನಾಡಿ, ಜಿಲ್ಲಾ ಮಟ್ಟದ ಯೋಗ ದಿನಾಚರಣೆಯನ್ನು ನೆಹರು ಕ್ರೀಡಾಂಗಣದಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಆಚರಿಸಲಾಗುವುದು. ಸಾರ್ವಜನಿಕರು, ಯೋಗಾಸಕ್ತರು, ಎನ್‍ಎಸ್‍ಎಸ್ ವಿದ್ಯಾರ್ಥಿಗಳನ್ನೊಳಗೊಂಡಂತೆ ಯೋಗಾಭ್ಯಾಸವನ್ನು ನಡೆಸಲಾಗುವುದು ಎಂದು ತಿಳಿಸಿದರು.
     ಪತಂಜಲಿ ಯೋಗ ಕೇಂದ್ರದವರು ತಾವು ತಾಲ್ಲೂಕುಗಳಲ್ಲಿ ಹಾಗೂ ನಗರದ ಹಲವೆಡೆ ಯೋಗ ತರಬೇತಿಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.


    ಸಿಇಓ ಮಾತನಾಡಿ, ಪಾರ್ಕ್‍ಗಳು ಮತ್ತು ವಾಯುವಿಹಾರ ಮಾಡುವೆಡೆ ಜನರಿಗೆ ಯೋಗ ತರಬೇತಿ ನೀಡುವಂತೆ ಹಾಗೂ ಸಿಮ್ಸ್ ಕಾಲೇಜಿನಲ್ಲಿ ಮತ್ತು ಹೆಚ್ಚು ಜನ ಕೆಲಸ ಮಾಡುವೆಡೆ ಯೋಗ ವೈ-ಬ್ರೇಕ್ ಕಾರ್ಯಕ್ರಮ ಮಾಡುವಂತೆ ತಿಳಿಸಿದರು.
    ಹಾಗೂ ಕಾರ್ಯಕ್ರಮಕ್ಕೆ ಅಗತ್ಯವಾದ ಸೂಕ್ತ ಸ್ಥಳ, ಶುದ್ದ ಕುಡಿಯುವ ನೀರು ಇತರೆ ಮೂಲಭೂತ ವ್ಯವಸ್ಥೆಗಳನ್ನು ಈಗಿನಿಂದಲೇ ಸಿದ್ದಪಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಂತೆ ಸೂಚನೆ ನೀಡಿದರು.
    ಸಭೆಯಲ್ಲಿ ಯೋಗ ಮತ್ತು ಆರೋಗ್ಯ ಕೈಪಿಡಿ ಪೋಸ್ಟರ್‍ನ್ನು ಬಿಡುಗಡೆಗೊಳಿಸಲಾಯಿತು.


      ಸಭೆಯಲ್ಲಿ ಡಿಡಿಪಿಯು ಕೃಷ್ಣಪ್ಪ, ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆ ಸರ್ಜನ್ ಡಾ.ಸಿದ್ದನಗೌಡ ಪಾಟಿಲ್, ಡಾ.ನಾಗರಾಜ್ ನಾಯ್ಕ್, ನೆಹರು ಯುವ ಕೇಂದ್ರದ ಅಧಿಕಾರಿ ಉಲ್ಲಾಸ್, ಕೆಎಸ್‍ಆರ್‍ಪಿ ಕಮಾಂಡೆಂಟ್, ಎನ್‍ಎಸ್‍ಎಸ್ ಅಧಿಕಾರಿ ಡಾ.ನಾಗರಾಜ್ ಪರಿಸರ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಚಾರ್ಯರು, ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!