ಶಿವಮೊಗ್ಗ,
2023-24 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಎಲ್ಲ ಗ್ರಾಮಗಳಲ್ಲಿರುವ ದನಗಳಿಗೆ ಚರ್ಮಗಂಟು ರೋಗದ ವಿರುದ್ದ ದಿನಾಂಕ: 12-06-2023 ರಿಂದ 30-06-2023 ರವರೆಗೆ ಮೇಕೆ ಸಿಡುಬು(ಗೋಟ್ ಪಾಕ್ಸ್) ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಚರ್ಮಗಂಟು ರೋಗವು ಕ್ಯಾಪ್ರಿ ಫಾಕ್ಸ್ ವೈರಾಣುವಿನಿಂದ ಬರುವ ಸಾಂಕ್ರಾಮಿಕ ರೋಗವಾಗಿದ್ದು, ಮೇಕೆ ಸಿಡುಬು ಲಸಿಕೆಯಿಂದ ಇದನ್ನು ತಡೆಗಟ್ಟಬಹುದಾಗಿದೆ. ಕಳೆದ 2022-23 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸದರಿ ರೋಗೋದ್ರೇಕವು ಅತಿ ಹೆಚ್ಚಾಗಿ ಮಳೆಗಾಲ ಮುಕ್ತಾಯವಾದ ಕೂಡಲೇ ಕಂಡುಬಂದಿದ್ದು, ಪ್ರಸ್ತುತ ಮಳೆಗಾಲ ಪ್ರಾರಂಭವಾಗುತ್ತಿದ್ದು ಮಳೆಗಾಲದಲ್ಲಿ ಹೆಚ್ಚಾಗುವ ಸೊಳ್ಳೆ, ನೊಣ ಹಾಗೂ ಕೀಟಗಳ
ಕಡಿತದಿಂದ ರೋಗವು ಜಾನುವಾರುವಿನಿಂದ ಜಾನುವಾರುವಿಗೆ ಹರಡುವುದರಿಂದ ಮುಂಜಾಗ್ರತಾ ಕ್ರಮವಾಗಿ ರೋಗದ ವಿರುದ್ದ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನ್ನು ತಾಲ್ಲೂಕುವಾರು, ಗ್ರಾಮವಾರು ತಯಾರಿಸಲಾಗಿದ್ದು, ಪಶುಪಾಲನಾ ಇಲಾಖೆಯ ಅಧಿಕಾರಿ/ಸಿಬ್ಬಂದಿಯನ್ನೊಳಗೊಂಡ ಲಸಿಕಾ ತಂಡಗಳು ವೇಳಾಪಟ್ಟಿಯಂತೆ ಆಯಾ ಗ್ರಾಮಗಳಿಗೆ ಭೇಟಿ ನೀಡಿ ದನಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶು ಚಿಕಿತ್ಸಾ ಸಂಸ್ಥೆಗಳನ್ನು ಸಂಪರ್ಕಿಸಬಹುದೆಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಬಿ ಯಲಿ ತಿಳಿಸಿದ್ದಾರೆ.