ತಾಲ್ಲೂಕಿನ ಆನಂದಪುರಂ ಹೋಬಳಿ ಸಂಪಳ್ಳಿ-ಕೋಟೆಕೊಪ್ಪ ಗ್ರಾಮದ ಪ್ರೇಮ ಬಸವರಾಜ್ ಅವರ ಕುಟುಂಬದ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ, ಆರೋಪಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಸೋಮವಾರ ಬಿಜೆಪಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಹಾಲಪ್ಪ ಹರತಾಳು, ಸಂಪಳ್ಳಿ-ಕೋಟೆಕೊಪ್ಪ ಗ್ರಾಮದ ಸ.ನಂ. ೨೯ರಲ್ಲಿ ಹಲವು ವರ್ಷಗಳಿಂದ ತಮ್ಮ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಪ್ರೇಮ ಬಸವರಾಜ್ ಮತ್ತವರ ಕುಟುಂಬದ ಮೇಲೆ ಭೂಮಾಫಿಯಾ ದೌರ್ಜನ್ಯ ನಡೆಸಿದೆ. ಪ್ರೇಮ ಬಸವರಾಜ್ ಅವರ ಸಾಗುವಳಿ ಭೂಮಿ ಪಕ್ಕದಲ್ಲಿ ಜಮೀನು ಖರೀದಿಸಿದ ಕೆಲವು ರಾಜಕೀಯ ಪುಡಾರಿಗಳು ದೌರ್ಜನ್ಯ ನಡೆಸಿರುತ್ತಾರೆ. ಈ ದೌರ್ಜನ್ಯಕ್ಕೆ ಪೊಲೀಸರು ಸಹಕಾರ ನೀಡಿರುವುದು ಖಂಡನೀಯ ಎಂದರು.


ರಾಜಕೀಯ ಪುಡಾರಿಗಳ ದೌರ್ಜನ್ಯದಿಂದ ಹೆದರಿದ ಬಡ ಕುಟುಂಬದ ಪ್ರೇಮ ಅವರು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾರೆ. ಕ್ಷೇತ್ರವ್ಯಾಪ್ತಿಯಲ್ಲಿ ರಾಜಕೀಯ ಪ್ರಭಾವಿಗಳ ಕೃಪಕಟಾಕ್ಷದಿಂದ ಜಮೀನು ಕಬಳಿಸುವ ಪ್ರಯತ್ನ ಇತ್ತೀಚೆಗೆ ಹೆಚ್ಚಾಗಿದೆ. ಹೊಸನಗರದಲ್ಲಿ ಸಹ ಶುಂಠಿ ಬೆಳೆದ ಜಮೀನನ್ನು ಜೆಸಿಬಿ ಮೂಲಕ ತೆರವು ಮಾಡುವ ಪ್ರಯತ್ನ ನಡೆದಿದೆ. ತಕ್ಷಣ ಪ್ರೇಮ ಬಸವರಾಜ್ ಕುಟುಂಬದ ಮೇಲೆ ಹಲ್ಲೆ ಮಾಡಿದವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು. ವಿಧಾನಸಭೆಯಲ್ಲಿ ಬಿಜೆಪಿಯ ೬೬ ಸದಸ್ಯರು ಇದ್ದು ಸದನದಲ್ಲಿ ಪ್ರಶ್ನೆ ಮಾಡಲು ಮನವಿ ಮಾಡುತ್ತೇವೆ. ಅಧಿಕಾರಿಗಳು ಕ್ರಮ ಜರುಗಿಸದೆ ಹೋದಲ್ಲಿ ಉಗ್ರವಾದ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.


ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಏಕಾಏಕಿ ರೈತರ ಮೇಲೆ ದೌರ್ಜನ್ಯ ನಡೆಸಿರುವ ಕೃತ್ಯ ಖಂಡನೀಯ. ಸಂಪಳ್ಳಿ ಕೋಟೆಕೊಪ್ಪದ ಸ.ನಂ. ೨೯ರಲ್ಲಿ ವಾಸ ಮಾಡುತ್ತಿರುವ ರೈತರಿಗೆ ಇರುವುದೆ ಸ್ವಲ್ಪ ಭೂಮಿ. ಇರುವ ಭೂಮಿಯನ್ನು ಕಿತ್ತುಕೊಂಡಿದ್ದರಿಂದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾರೆ. ರೈತರ ಪರವಾಗಿ ಇರಬೇಕಾಗಿದ್ದ ಜನಪ್ರತಿನಿಧಿಗಳು ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವುದು ದುರದೃಷ್ಟಕರ ಎಂದರು.


ದಲಿತ ಮುಖಂಡ ನಟರಾಜ ಗೇರುಬೀಸು ಮಾತನಾಡಿ, ಬಡ ಮಡಿವಾಳ ಕುಟುಂಬಕ್ಕೆ ಸೇರಿದವರನ್ನು ಜಮೀನಿನಿಂದ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಕೆಲವೊಮ್ಮೆ ಸ್ಥಳೀಯ ಶಾಸಕರಿಗೆ ಗೊತ್ತಿಲ್ಲದಂತೆ ಅವರ ಹಿಂಬಾಲಕರು ಇಂತಹ ಕೃತ್ಯ ನಡೆಸುವ ಸಾಧ್ಯತೆ ಇದೆ. ಕ್ಷೇತ್ರದ ಜನಪ್ರತಿನಿಧಿ ಇಂತಹ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು. ಬಡಕುಟುಂಬವನ್ನು ಒಕ್ಕಲೆಬ್ಬಿಸದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.


ಮಧುರಾ ಶಿವಾನಂದ್, ಕೊಟ್ರಪ್ಪ ಎಂ.ಎಸ್., ಗಿರೀಶ್ ಗೌಡ, ಗಣೇಶ್ ಪ್ರಸಾದ್, ಅಕ್ಷರ, ಗಿರೀಶ್ ಹಕ್ರೆ, ದೇವೇಂದ್ರಪ್ಪ, ಬಸವರಾಜ್, ಮೈತ್ರಿ ಪಾಟೀಲ್, ಸವಿತಾ ವಾಸು, ಕೆರೆಯಪ್ಪ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!