ಶಿವಮೊಗ್ಗ: ರೆರಾ ಕಾಯ್ದೆಯು ಗ್ರಾಹಕರ ಹಿತರಕ್ಷಣೆಯಿಂದ ಜಾರಿ ಆಗಿದ್ದರೂ ನಿವೇಶನ ಮಾಲೀಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಗಳು ಗಮನ ವಹಿಸಿ ಪರಿಹರಿಸುವ ಕೆಲಸ ಮಾಡಬೇಕಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ಜಿಲ್ಲಾ ನಿವೇಶನ ಮಾಲೀಕರ ಸಂಘದ ಸಹಯೋಗದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ “ರೆರಾ ಕಾಯ್ದೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕಾನೂನು ಅನುಷ್ಠಾನ” ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೆರಾ ಕಾಯ್ದೆ ಅನುಷ್ಠಾನದಿಂದ ನಿವೇಶನ ಮಾಲೀಕರು, ಕಾನೂನು ಪಾಲನೆ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಸಂದರ್ಭಗಳಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಅವಲೋಕನ ನಡೆಸುವ ಅಗತ್ಯವಿದೆ. ಯಾರಿಗೂ ತೊಂದರೆ ಆಗದಂತೆ ಕಾಯ್ದೆಗಳ ಅನುಷ್ಠಾನ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರದ ಗಮನಕ್ಕೆ ತರಬೇಕಿದೆ ಎಂದು ತಿಳಿಸಿದರು.
ಅಮೃತ ಮಹೋತ್ಸವ ಪ್ರಯುಕ್ತ ಸಂಘವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ನಿವೇಶನ ಮಾಲೀಕರಿಗೆ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಆಶಯದಿಂದ ರೆರಾ ಕಾಯ್ದೆ ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಉಪಯುಕ್ತ ಆಗುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಶಿವಮೊಗ್ಗ ಜಿಲ್ಲಾ ನಿವೇಶನ ಮಾಲೀಕರ ಸಂಘದ ಪ್ರಧಾನ ಕಾರ್ಯದಶಿ ಶ್ರೀಕಾಂತ್ ಕಾಮತ್ ಮಾತನಾಡಿ, ರೆರಾ ಕಾಯ್ದೆ ಅನುಷ್ಠಾನದಿಂದ ಅಗುತ್ತಿರುವ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸಲು ಸರ್ಕಾರ ಗಮನ ವಹಿಸಬೇಕಿದೆ. ನಿವೇಶನ ಮಾಲೀಕರಿಗೆ ಆಗುವ ಸಮಸ್ಯೆಗಳನ್ನು ತಪ್ಪಿಸಬೇಕಿದೆ ಎಂದು ತಿಳಿಸಿದರು.
ರೆರಾ ಕಾಯ್ದೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕಾನೂನು ಅನುಷ್ಠಾನ ವಿಷಯ ಕುರಿತು ವಿನಯ್ ತ್ಯಾಗರಾಜ್ ಹಾಗೂ ಇ.ಸುಹೈಲ್ ಅಹ್ಮದ್ ವಿಶೇಷ ಉಪನ್ಯಾಸ ನೀಡಿದರು. ಕಾನೂನು ನಿಯಮ ಹಾಗೂ ಪಾಲಿಸಬೇಕಾದ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ನಿರ್ದೇಶಕ ಜಗದೀಶ್ ಮಾತನವರ್, ಮಂಜೇಗೌಡ, ಪರಮೇಶ್ವರ್, ಪ್ರಮುಖರಾದ ಕಡಿದಾಳ್ ಗೋಪಾಲ್, ಖಾದರ್ ಪಾಷಾ, ಮಂಜುನಾಥ್, ಕೆ.ವಿ.ವಸಂತ್ ಕುಮಾರ್, ಜೆ.ಆರ್.ವಾಸುದೇವ್ ಮತ್ತಿತರರು ಉಪಸ್ಥಿತರಿದ್ದರು.