ಸಾಗರ : ಶಾಸಕ ಗೋಪಾಲಕೃಷ್ಣ ಬೇಳೂರು ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದು ಕ್ಷೇತ್ರದ ಅಭಿವೃದ್ದಿ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಅವರ ಅಭಿವೃದ್ದಿಪರ ಆಲೋಚನೆಗೆ ಸರ್ಕಾರ ಉತ್ತೇಜನ ನೀಡಬೇಕು ಎಂದು ಕಾಂಗ್ರೇಸ್ ಅಸಂಘಟಿತ ಕಾರ್ಮಿಕರ ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಿ ಬೇಸೂರು ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ನಿಂತು ಹೋಗಿದೆ. ಅದನ್ನು ಮುಂದುವರೆಸಲು ಬೇಳೂರು ಅವರಿಗೆ ಸಚಿವ ಸ್ಥಾನ ಸಿಕ್ಕರೆ ಹೆಚ್ಚಿನ ಅನುದಾನ ತಂದು ಅಭಿವೃದ್ದಿಪಡಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಬೇಳೂರು ಗೆಲುವಿನಲ್ಲಿ ಮಹಿಳಾ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ.
ಅಸಂಘಟಿತ ಕಾರ್ಮಿಕರ ಘಟಕದಿಂದ ಕ್ಷೇತ್ರದಾದ್ಯಂತ ಅಡಿಕೆ ಸುಲಿಯುವವರು, ಮನೆ ಕೆಲಸ ಮಾಡುವವರು, ಗಾರ್ಮೇಂಟ್ಸ್‌ನಲ್ಲಿ ಕೆಲಸ ಮಾಡುವವರ ಮನವೊಲಿಸಿ ಕಾಂಗ್ರೇಸ್ ಪರವಾಗಿ ಮತ ನೀಡುವಂತೆ ಮನವರಿಕೆ ಮಾಡಲಾಗಿತ್ತು. ಅದು ಯಶಸ್ವಿಯಾಗಿದೆ. ಈ ಕಾರ್ಮಿಕರಿಗೆ ಘಟಕದ ವತಿಯಿಂದ ಕಾರ್ಡ್ ನೀಡಲಾಗಿದ್ದು ಹಿಂದಿನ ಶಾಸಕರ ಅವಧಿಯಲ್ಲಿ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಈಗಿನ ಶಾಸಕರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದು ಸೌಲಭ್ಯ ಸಿಗುವ ಭರವಸೆ ಇದೆ. ಮಹಿಳಾ ಕಾರ್ಮಿಕರ ಹಿತರಕ್ಷಣೆಗಾಗಿ ನಮ್ಮ ಮಹಿಳಾ ಘಟಕ ಸದಾ ಸಿದ್ದವಿದೆ ಎಂದರು.
ಬೈಪಾಸ್ ರಸ್ತೆಯ ಷಾಹಿ ಗಾರ್ಮೆಂಟ್ಸ್ ಸಮೀಪ ಇರುವ ಬಾರ್ ಎಂಡ್ ರೆಸ್ಟೋರೆಂಟ್‌ನಿಂದ ಗಾರ್ಮೇಂಟ್ಸ್‌ಗೆ ಬಂದು ಹೋಗುವ ಮಹಿಳೆಯರಿಗೆ, ಅಕ್ಕಪಕ್ಕದ ನಿವಾಸಿಗಳಿಗೆ ತೀವೃ ತೊಂದರೆಯಾಗುತ್ತಿದೆ. ಗಾರ್ಮೇಂಟ್ಸ್ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ಮಹಿಳೆಯರಿಗೆ ಕುಡುಕರು ಕಾಟ ಕೊಡುತ್ತಿದ್ದಾರೆ. ಹಿಂದಿನ ಶಾಸಕರಿಗೆ ಈ ಬಗ್ಗೆ ಮನವಿ ಮಾಡಿದ್ದರೂ ಅವರು ಸ್ಪಂದಿಸಿರಲಿಲ್ಲ.
ಮಹಿಳೆಯರಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಈ ಬಾರ್ ಎಂಡ್ ರೆಸ್ಟೋರೆಂಟ್ ತಕ್ಷಣ ಮುಚ್ಚಲು ಮನವಿ ಮಾಡಲಾಗುತ್ತದೆ. ಒಂದೊಮ್ಮೆ ಮುಚ್ಚದೆ ಹೋದಲ್ಲಿ ನಮ್ಮ ಘಟಕದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಟಿಯಲ್ಲಿ ಘಟಕದ ಉಪಾಧ್ಯಕ್ಷೆ ಸುಜಾತ ಯು., ಕಾರ್ಯದರ್ಶಿ ಶೋಭಾ, ದೀಪಾ ಕೆ. ಹಾಜರಿದ್ದರು.