ಶಿವಮೊಗ್ಗ: ಜನರ ಪ್ರೀತಿಯಿಂದ, ಪಕ್ಷದ ಗ್ಯಾರಂಟಿ ಕಾರ್ಡ್‌ನಿಂದ, ಕಾರ್ಯಕರ್ತರ ಶ್ರಮದಿಂದ ಈ ಬಾರಿ ನಾನು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ಮುಗಿದಿದೆ. ಮುಖ್ಯವಾಗಿ ಶಾಂತಿಯುತವಾಗಿ ನಡೆದಿದೆ. ಜನರ ಪ್ರೀತಿಗೆ ಮೂಕವಿಸ್ಮಿತನಾಗಿದ್ದೇನೆ. ಪ್ರಚಾರಕ್ಕೆ ಹೋಗಿದ್ದಾಗ ಮತದಾರರು ನನ್ನನ್ನು ಆತ್ಮೀಯತೆಯಿಂದ ಬರಮಾಡಿಕೊಂಡು ನಾವು ನಿಮ್ಮೊಂದಿಗಿದ್ದೇವೆ ಎಂದು ಹೇಳಿದ್ದನ್ನು ಮರೆಯುವುದಿಲ್ಲ. ಮತದಾನ ಮುಗಿದ ಮೇಲೂ ಕೂಡ ನಾವು ನಿಮಗೆ ಮತಹಾಕಿದ್ದೇವೆ ಎಂದು ಮತದಾರರು ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದರು.
ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನ ಪರವಾಗಿ ಹಲಿರುಳು ಶ್ರಮಿಸಿದ್ದಾರೆ. ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ಮನೆಮನೆಗೆ ತಲುಪಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಮತ್ತು ಅಭಿವೃದ್ಧಿ ಹಾಗೂ ಶಾಂತಿಗಾಗಿ ಮತಗಳ ವಿಭಜನೆ ಇಲ್ಲದೆ ಮತ ಚಲಾಯಿಸಿದ್ದಾರೆ. ಗೆಲುವು ಖಚಿತ. ಇದಕ್ಕಾಗಿ ಮತದಾರರಿಗೆ, ಕಾರ್ಯಕರ್ತರಿಗೆ, ಜಿಲ್ಲಾಡಳಿತಕ್ಕೆ, ಆಯೋಗಕ್ಕೆ. ಪೊಲೀಸರಿಗೆ ಧನ್ಯವಾದಗಳು ಎಂದರು.
ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲಿಯೂ ಗೆಲ್ಲುತ್ತೇವೆ. ಒಂದೆರಡು ಕ್ಷೇತ್ರಗಳಲ್ಲಿ ಬಿಗಿ ಇರಬಹುದು. ಐದು ಕ್ಷೇತ್ರಗಳಲ್ಲಂತೂ ಗೆದ್ದೇ ಗೆಲ್ಲುತ್ತೇವೆ ಬಿಜೆಪಿ ದುರಾಡಳಿತದಿಂದ ಬೇಸತ್ತ ಜನರು ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಈ ಬಾರಿ ಅಧಿಕಾರಿದ ಚುಕ್ಕಾಣಿ ಹಿಡಿಯುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಎನ್. ರಮೇಶ್, ಎಸ್.ಕೆ. ಮರಿಯಪ್ಪ, ಇಸ್ಮಾಯಿಲ್ ಖಾನ್, ಎಲ್. ಸತ್ಯನಾರಾಯಣ ರಾವ್, ಎಸ್.ಪಿ. ದಿನೇಶ್, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮೇಹಕ್ ಶರೀಫ್, ಕಲೀಂ ಪಾಶಾ, ಶಮೀರ್ ಖಾನ್ ಮುಂತಾದವರು ಇದ್ದರು.