ಶಿವಮೊಗ್ಗ,ಅ.17:
ಶಿವಮೊಗ್ಗ ದಸರಾ ಅಂಗವಾಗಿ ಇಂದು ಮಹಾನಗರಪಾಲಿಕೆ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪಾಲಿಕೆ ಆವರಣದಿಂದ ಅಲಂಕೃತ ವಾಹನದಲ್ಲಿ ಚಂಡಿಕಾದುರ್ಗಾ ಪರಮೇಶ್ವರಿ ದೇವಾಲಯದವರೆಗೆ ಚಾಮುಂಡೇಶ್ವರಿ ದೇವಿ ಮೆರವಣಿಗೆ ನಡೆಸಲಾಯಿತು.
ಜಾನಪದ ಕಲಾತಂಡಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ಮಹಾನಗರಪಾಲಿಕೆ ಮೇಯರ್, ಉಪಮೇಯರ್ ಸೇರಿದಂತೆ ಸೀಮಿತ ಸಂಖ್ಯೆಯ ಜನರು ಭಾಗವಹಿಸಿದ್ದರು. ಕೊರೋನಾ ಕಾರಣದಿಂದ ಈ ಬಾರಿ ಸರಳವಾಗಿ ಸಾಂಪ್ರದಾಯಿಕ ದಸರಾ ಆಚರಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ದುಷ್ಟ ಶಕ್ತಿ ದೂರವಾಗಲಿ, ಕಾಡುವ ಶಕ್ತಿಗಿಂತ ಕಾಪಾಡುವ ಶಕ್ತಿ ಹೆಚ್ಚಾಗಲಿ, ಎಲ್ಲರಿಗೂ ಆರೋಗ್ಯ ಸಿಗಲಿ ಎಂದು ಆಶಿಸಿದ್ದಾರೆ.

ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ


ಮೈಸೂರು ಬಿಟ್ಟರೆ ಶಿವಮೊಗ್ಗದಲ್ಲಿ ವೈಭವದಿಂದ ದಸರಾ ಆಚರಿಸಲಾಗುತ್ತದೆ. ಆದರೆ ಈ ಬಾರಿಕೊರೋನಾ ಅಡ್ಡಿಯಾಗಿವೆ. ಶಿವಮೊಗ್ಗದ ಸಮಗ್ರ ಅಭಿವೃದ್ದಿಗೆ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸೋಣ ಎಂದರು.
ಕೊವಿಡ್,ಅತಿವೃಷ್ಟಿ ಸೇರಿದಂತೆ ಹಲವು ಸವಾಲು ಎದುರಾಗಿದೆ. ಸರ್ಕಾರಕ್ಕೆ ಸವಾಲು ಎದುರಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಸ್ಯೆ ನಿವಾರಣೆಗೆ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ರಾಜ್ಯಕ್ಕೆ ಅನುದಾನಕ್ಕೆ ಪ್ರಧಾನಿಯವರನ್ನು ಭೇಟಿಯಾಗಿದ್ದಾರೆ. ಭೇಟಿ ಸಂದರ್ಭದಲ್ಲಿ ಪ್ರಧಾನಿ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಿದ್ದ ಬಗ್ಗೆ ಸಿಎಂ ಜೊತೆ ಮಾತನಾಡಿದ್ದಾರೆ. ಹಾಗೆಂದು ಖಜಾನೆ ಖಾಲಿಯಾಗಿಲ್ಲ. ಎಚ್ಚರಿಕೆಯ ಹೆಜ್ಜೆ ಇಡಲಾಗುತ್ತಿದೆ ಎಂದು ತಿಳಿಸಿದರು.

ತಾಯಿ


ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರವನ್ನು ಮಾದರಿಯಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಸಚಿವ ಕೆ.ಎಸ್.ಈಶ್ವರಪ್ಪ, ಮೇಯರ್ ಸೇರಿದಂತೆ ಎಲ್ಲರೂ ಸೇರಿ ಮಾದರಿ ನಗರ ನಿರ್ಮಿಸೋಣ. ಇನ್ನಷ್ಟು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಮೇಯರ್ ಸುವರ್ಣ ಶಂಕರ್ ಮಾತನಾಡಿ, ಈ ಬಾರಿ ಸರಳವಾಗಿ ದಸರಾ ಆಚರಿಸಲಾಗುತ್ತಿದೆ. ಕೊರೋನಾ ದೂರವಾಗಿ ಮಂದಿನ ಬಾರಿ ಅದ್ದೂರಿಯಾಗಿ ದಸರಾ ಆಚರಿಸಲಾಗುವುದು. ಚಾಮುಂಡೇಶ್ವರಿ ದೇವಿಗೆ ೯ ದಿನಗಳ ಕಾಲ ಪೂಜೆ ನೆರವೇರಲಿದೆ. ನವದುರ್ಗಾ ಪೂಜೆ ನಡೆಯಲಿದೆ. ಶೈಲಪುತ್ರಿ, ಚಂದ್ರಘಂಟ, ಮಹಾಸರಸ್ವತಿ, ಮಹಾಕಾಳಿ ಸೇರಿದಂತೆ ೯ ದಿನಗಳ ಕಾಲ ಪೂಜೆ ನೆರವೇರಿಸಲಾಗುವುದು. ವಿಜಯದಶಮಿ ದಿನ ನಂದಿ ಪೂಜೆಯೊಂದಿಗೆ ದೇವಿಯ ಮೆರವಣಿಗೆ ನಡೆಯಲಿದೆ.
ಚಂದ್ರಶೇಖರ ಆಜಾದ್ ಫ್ರೀಡಂ ಪಾರ್ಕ್‌ನ ಬನ್ನಿಮಂಟಪದಲ್ಲಿ ಅಂಬುಛೇದನ ನಡೆಯಲಿದೆ. ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.ನೇರ ಪ್ರಸಾರದಲ್ಲಿ ಕಾರ್ಯಕ್ರಮ ವೀಕ್ಷಿಸಬಹುದು ಎಂದರು.
ಈ ಸಂದರ್ಭದಲ್ಲಿ ಕೊರೊನಾ ವಾರಿಯರ‍್ಸ್‌ಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪಮೇಯರ್ ಸುರೇಖಾ ಮುರಳೀಧರ್, ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಹೆಚ್.ಸಿ.ಯೋಗೀಶ್, ಇ.ವಿಶ್ವಾಸ್, ಅನಿತಾ ರವಿಶಂಕರ್, ಸುನಿತಾ ಕೆ.ವಿ.ಅಣ್ಣಪ್ಪ, ವಿಶ್ವನಾಥ್, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಆಯುಕ್ತ ಚಿದಾನಂದ ವಠಾರೆ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!