ಭದ್ರಾವತಿ,ಅ.13:

ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ನವರಾತ್ರಿ/ದಸರಾ ಹಬ್ಬವನ್ನು ಈ ಬಾರಿ ಸರಳವಾಗಿ ಆಚರಣೆ ನಡೆಸಲು ನಗರಸಭೆ ತೀರ್ಮಾನಿಸಿದೆ.
ಈ ಕುರಿತಂತೆ ನಡೆದ ಸಭೆಯ ನಂತರ ಮಾತನಾಡಿದ ಪೌರಾಯುಕ್ತ ಮನೋಹರ್, ಈ ಬಾರಿ ಕೊರೋನಾ ಸೋಂಕು ಹರಡುವ ಭೀತಿಯಿರುವ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲು ನಿರ್ಧರಿಸಲಾಗಿದ್ದು, 9 ದಿನಗಳ ಕಾಲ ಕೊರೋನಾ ಕುರಿತಂತೆ ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಜಾಥಾ ನಡಿಗೆ, ಅನುಭವ, ಅನಿಸಿಕೆಗಳ ಜೊತೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ಬನ್ನಿ ಮಂಟಪಕ್ಕೆ ಮೂರು ಗ್ರಾಮ ದೇವತೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ದಸರಾ ಅಂಗವಾಗಿ ಪ್ರತಿ ವರ್ಷ ವಿಜ್ರಂಭಣೆಯಿಂದ ದೇವಾನು ದೇವತೆಗಳ ಮೆರವಣಿಗೆ ಮತ್ತು ಸಾಂಸ್ಕೃತಿಕ ಮೇಳಗಳನ್ನು ಕೊರೊನಾ ನಿಮಿತ್ತ ಈ ವರ್ಷ ರದ್ದುಪಡಿಸಲಾಗಿದೆ ಎಂದರು.
ಕಾರ್ಯಕ್ರಮಗಳು ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿದರು.
ಏನೆಲ್ಲಾ ಕಾರ್ಯಕ್ರಮಗಳಿವೆ?
ಅಕ್ಟೋಬರ್ 17 ರ ಶನಿವಾರ: ಬೆಳಿಗ್ಗೆ 10.30 ಕ್ಕೆ ಗ್ರಾಮ ದೇವತೆ ಹಳದಮ್ಮ ದೇವಾಲಯದಲ್ಲಿ ನಿವೃತ್ತ ಸೈನಿಕರು, ಕೊರೊನಾ ವಾರಿಯರ್ಸ್‌ 5 ಮಂದಿ ಸೇರಿದಂತೆ ಶ್ರೀದೇವತೆಗೆ ಮತ್ತು ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ. ಸಂಗಮೇಶ್ವರ್ ಚಾಲನೆ ನೀಡಲಿದ್ದಾರೆ.
ಅ.18 ರ ಭಾನುವಾರ: ಬೆಳಿಗ್ಗೆ 10ಕ್ಕೆ ನಗರಸಭೆಯ ಆವರಣದಿಂದ ಜಾಗೃತಿ ನಡಿಗೆ ನಡೆಯಲಿದೆ.
ಅ.19ರ ಸೋಮವಾರ: ನ್ಯೂಟೌನ್ ಭಂಟರ ಭವನದಲ್ಲಿ ಸಂಜೆ 4 ಗಂಟೆಗೆ ಕೋವಿಡ್ ಕುರಿತ ಅನುಭವ, ಅನಿಸಿಕೆ, ಕವನ ರಚನೆ ಸ್ಪರ್ಧೆ ನಡೆಯಲಿದೆ.
ಅ.20ರ ಮಂಗಳವಾರ: ಬೆಳಿಗ್ಗೆ 11 ಗಂಟೆಗೆ ಕೋವಿಡ್ ಕುರಿತ ಜಾಗೃತಿಗಾಗಿ ರಂಗೋಲೆ ಸ್ಪರ್ಧೆ
ಅ.21ರ ಬುಧುವಾರ: ಬೆಳಿಗ್ಗೆ 11 ಗಂಟೆಗೆ ಅಡುಗೆ ಆರೋಗ್ಯ ಸ್ಪರ್ಧೆ ಹಾಗೂ 3 ಮಂದಿ ಅಡುಗೆ ಭಕ್ಷಕರಿಗೆ ಬಹುಮಾನ
ಅ.22ರ ಗುರುವಾರ: ಮಧ್ಯಾಹ್ನ 3 ಗಂಟೆಗೆ ಕೊರೋನಾ ಪ್ರಬಂಧ ಸ್ಪರ್ಧೆಯನ್ನು (ಹಳೇನಗರದ ಬಲಿಜ ಸಮುದಾಯ ಭವನದಲ್ಲಿ)
ಅ.23ರ ಶುಕ್ರವಾರ: ಮಧ್ಯಾಹ್ನ 3 ಗಂಟೆಗೆ ಕೊರೊನಾ ಬಗ್ಗೆ ಭಾಷಣ ಸ್ಪರ್ಧೆಗಳು ನಡೆಯಲಿದೆ. ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಆಯಾ ವಿಭಾಗಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಆಸಕ್ತರು ದೂರವಾಣಿ ಅಥವಾ ನಗರಸಭೆಯಲ್ಲಿ ಖುದ್ದಾಗಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.
ಅ.24ರ ಶನಿವಾರ: ಮಧ್ಯಾಹ್ನ 3 ಗಂಟೆಗೆ ಕೊರೊನಾ ತಡೆಗಟ್ಟಲು ಕರ್ತವ್ಯದಲ್ಲಿ 6 ತಿಂಗಳಿಂದ ಸೇವೆ ಸಲ್ಲಿಸಿದ ಅಧಿಕಾರಿ ಸಿಬ್ಬಂದಿಗಳಿಗೆ ನಗರಸಭೆಯಲ್ಲಿ ಗೌರವಾರ್ಪಣೆ
ಅ.25ರ ಭಾನುವಾರ: ನಗರಸಭೆಯ ವಾಹನಗಳಿಗೆ ಆಯುಧ ಪೂಜೆ
ಅಕ್ಟೋಬರ್ 26ರ ಸೋಮವಾರ: ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಅಂದು ಸಂಜೆ 6 ಗಂಟೆಗೆ ನಡೆಯುವ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಗ್ರಾಮ ದೇವತೆಗಳಾದ ಶ್ರೀಲಕ್ಷೀನರಸಿಂಹ ಸ್ವಾಮಿ, ಹಳದಮ್ಮ, ಕಾಳಿಕಾಂಬ ದೇವರುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಶಮಿ ಪೂಜೆ ಮತ್ತು ಶಿಲ್ಪಿ ನಿರ್ಮಿತ ರಾವಣ ಸಂಹಾರ ನಡೆದು ಹಬ್ಬ ಸಂಪನ್ನಗೊಳ್ಳಲಿ ಬನ್ನಿ ಮುಡಿಯುವ ಸ್ಥಳಕ್ಕೆ ಕೇವಲ ಪ್ರಮುಖ 100 ಜನರಿಗೆ ಮಾತ್ರ ಪಾಸ್ ನೀಡುವ ಮೂಲಕ ಅವಕಾಶ ಕಲ್ಪಿಸಲಾಗುವುದು.
ಕಂದಾಯಾಧಿಕಾರಿ ರಾಜಕುಮಾರ್ ಪ್ರಾಸ್ಥಾವಿಕ ನುಡಿಗಳನ್ನಾಡಿ ಮಾಹಿತಿ ನೀಡಿದರು. ಎಇಇ ಶ್ರೀರಂಗ ರಾಜಪುರಿ, ಲೆಕ್ಕಾಧಿಕಾರಿ ಮಹಮ್ಮದ್ ಅಲಿ ವೇದಿಕೆಯಲ್ಲಿದ್ದರು. ಹಾ.ರಾಮಪ್ಪ, ನರಸಿಂಹಾಚಾರ್, ಶ್ರೀನಿವಾಸ್, ಕೃಷ್ಣಪ್ಪ, ಬಿ.ಕೆ. ಶ್ರೀನಾಥ್, ರಮಾಕಾಂತ್, ಸಂತೋಷ್ ಕುಮಾರ್, ಮಂಜು, ಎನ್. ಕೃಷ್ಣಮೂರ್ತಿ ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!