ಶಿವಮೊಗ್ಗ: ಬಿಜೆಪಿ ಕಾಟಾಚಾರದ ಪ್ರಣಾಳಿಕೆ ಮಾಡಿಲ್ಲ. ಎಲ್ಲಾ ಸ್ತರದ ವ್ಯಕ್ತಿಗಳ ಅಭಿಪ್ರಾಯ ಸಂಗ್ರಹಿಸಿ ಸಲಹೆ ಪಡೆದು ಸೂಚನೆಗಳನ್ನು ಆಹ್ವಾನಿಸಿ ಜನಪ್ರಿಯ ಜನೋಪಯೋಗಿ ಜನಹಿತ ಪ್ರಣಾಳಿಕೆ ಸಿದ್ಧಪಡಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದ್ದಾರೆ
.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪ್ರಜಾ ಪ್ರಣಾಳಿಕೆ -2023 ಬಿಡುಗಡೆಗೊಳಿಸಿ ಮಾತನಾಡಿದರು.
ನಗರ ಕ್ಷೇತ್ರಕ್ಕೆ ವಿಶೇಷ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದೇವೆ. ಅದು ನಾಳೆ ಬಿಡುಗಡೆಯಾಗಲಿದೆ ಎಂದ ಅವರು, ವಾರೆಂಟಿ ಇಲ್ಲದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಜನ ನಂಬುವುದಿಲ್ಲ. ಬಿಜೆಪಿ ಎಲ್ಲಾ ವರ್ಗದ ಜನರಿಗೂ ಸಮಾನ ಆದ್ಯತೆ ನೀಡಿದೆ. ಬಿಪಿಎಲ್ ಕುಟುಂಬಗಳಿಗೆ ಪ್ರತಿ ವರ್ಷ ಯುಗಾದಿ, ಗಣೇಶ ಚತರ್ಥಿ ಹಾಗೂ ದೀಪಾವಳಿಗೆ ತಲಾ ಒಂದರಂತೆ ಉಚಿತವಾಗಿ ಮೂರು ಸಿಲಿಂಡರ್, ಪ್ರತಿ ಮಹಾನಗರ ಪಾಲಿಕೆ ವಾರ್ಡ್ ಗಳಲ್ಲಿ ಅಟಲ್ ಆಹಾರ ಕೇಂದ್ರಗಳ ಸ್ಥಾಪನೆ, ಈ ಮೂಲಕ ಕಡಿಮೆ ದರದಲ್ಲಿ ಗುಣಮಟ್ಟದ ಆರೋಗ್ಯಕರ ಆಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಪ್ರತಿ ಬಿಪಿಎಲ್ ಕುಟುಂಬಕ್ಕೆ ಪ್ರತಿದಿನ ಅರ್ಧ ಲೀ. ನಂದಿನಿ ಹಾಲು, ಹಾಗೂ ಪ್ರತಿ ತಿಂಗಳು 5 ಕೆಜಿ ಶ್ರೀ ಅನ್ನ –ಸಿರಿಧಾನ್ಯ ಒಳಗೊಂಡ ಪಡಿತರ ಕಿಟ್ ವಿತರಣೆ, ಏಕರೂಪ ನಾಗರಿಕ ಸಂಹಿತೆ ಜಾರಿ, ಸರ್ವರಿಗೆ ಸೂರು ಯೋಜನೆಯಡಿ 10 ಲಕ್ಷ ನಿವೇಶನ ಹಂಚಿಕೆ, ಒನಕೆ ಓಬವ್ವ ಸಾಮಾಜಿಕ ನ್ಯಾಯನಿಧಿ ಮೂಲಕ ಎಸ್.ಸಿ., ಎಸ್.ಟಿ. ಸಮುದಾಯದ ಮಹಿಳೆಯರಿಗೆ 10 ಸಾವಿರ ರೂ. ವರೆಗೆ ಸ್ಥಿರ ಠೇವಣಿ, ಬೆಂಗಳೂರಿನ ಅಪಾರ್ಟ್ ಮೆಂಟ್ ಗಳಲ್ಲಿ ಸುಲಲಿತ ಜೀವನಕ್ಕೆ ಮಾಲೀಕತ್ವ ಕಾಯ್ದೆಗೆ ತಿದ್ದುಪಡಿ, ಕುಂದು ಕೊರತೆಗಳ ಪರಿಹಾರಕ್ಕೆ ಆನ್ ಲೈನ್ ವ್ಯವಸ್ಥೆ
ಮಾಡಲಾಗುವುದು ಎಂದರು.
ವಿಶ್ವೇಶ್ವರಯ್ಯ ವಿದ್ಯಾ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಉನ್ನತ ಶ್ರೇಣಿಗೆ, ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಬುದ್ಧರು ಹಾಗೂ ಸಂಸ್ಥೆಗಳ ಜೊತೆ ಸಹಭಾಗಿತ್ವ, ಸಮನ್ವಯ ಯೋಜನೆಯಡಿ ಪ್ರತಿಭಾವಂತ ಯುವ ವೃತ್ತಿಪರರಿಗೆ ಶಿಕ್ಷಣ , ಐಎಎಸ್ / ಕೆಎಎಸ್/ ಬ್ಯಾಂಕಿಂಗ್ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ಪಡೆಯಲು ಆರ್ಥಿಕ ಪ್ರೋತ್ಸಾಹ, ಮಿಷನ್ ಸ್ವಾಸ್ಥ್ಯ ಕರ್ನಾಟಕ ಯೋಜನೆಯಡಿ, ಅತ್ಯಾಧುನಿಕ ಸೌಲಭ್ಯ ಹೊಂದಿರುವ ನಮ್ಮ ಕ್ಲಿನಿಕ್ ಸ್ಥಾಪನೆ ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಸಂಪೂರ್ಣ ಆರೋಗ್ಯ ತಪಾಸಣಾ ಸೌಲಭ್ಯ, ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಕೇಂದ್ರವಾಗಿ ಕರ್ನಾಟಕ, ಕೆ -ಅಗ್ರಿಫಂಡ್ ಗೆ 30 ಸಾವಿರ ಕೋಟಿ ರೂ. ನೀಡಲಾಗುವುದು ಎಂದರು.
ಬಜರಂಗದಳ ನಿಷೇಧಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿಚಾರಧಾರೆಗೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಣಾಳಿಕೆ ಸಮಿತಿ ಸಂಚಾಲಕ ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ಧರಾಮಣ್ಣ, ಕುಮಾರ್ ನಾಯ್ಡು, ಚಂದ್ರಶೇಖರ್, ಸುನಿತಾ ಅಣ್ಣಪ್ಪ, ರುದ್ರೇಶ್, ಅಣ್ಣಪ್ಪ, ಮೊದಲಾದವರಿದ್ದರು.