ಶಿವಮೊಗ್ಗ: ಶಾಂತಿಯುತವಾದ ಕ್ರಿಶ್ಚಿಯನ್ ಸಮುದಾಯದವರು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕರೆ ನೀಡಿದರು.
ಅವರು ಕ್ರೈಸ್ತ ಸಮುದಾಯದ ಮುಖಂಡರೊಂದಿಗೆ ನಡೆಸಿದ ಚರ್ಚೆಯಲ್ಲಿ ಮಾತನಾಡುತ್ತಾ, ಕ್ರಿಶ್ಚಿಯನ್ ಸಮುದಾಯವು ತುಂಬಾ ಶಾಂತಿಯುತ ಸಮುದಾಯವಾಗಿದ್ದು ಹಲವಾರು ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತವಾಗಿದೆ. ನಮ್ಮ ಡಬಲ್ ಇಂಜಿನ್ ಸರ್ಕಾರವು ಕ್ರೈಸ್ತರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಕೊಟ್ಟಿದೆ ಎಂದು ಹೇಳುತ್ತಾ, ಕ್ರಿಶ್ಚಿಯನ್ ಸಮುದಾಯದ ಮುಖಂಡರುಗಳು ರಾಜಕೀಯದಲ್ಲಿ ಅಪಾರ ಪ್ರಮಾಣದಲ್ಲಿ ಬಂದು ತೊಡಗಿಸಿಕೊಳ್ಳಬೇಕು ಹೇಳಿದರು.
ಕ್ರಿಶ್ಚಿಯನ್ ಸಮುದಾಯದ ಪರವಾಗಿ ಬಿಜೆಪಿ ಸರ್ಕಾರಗಳು ಸದಾಕಾಲ ಇರುತ್ತದೆ. ನಿಮ್ಮ ಜೊತೆಯಲ್ಲಿ ಸದಾಕಾಲ ನಾನು ಕೂಡ ಇರುತ್ತೇನೆ ಎಂದು ಹೇಳಿದರು.
ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ನಟರಾಜ್ ಮಾತನಾಡಿ, ಕ್ರಿಶ್ಚಿಯನ್ ಸಮುದಾಯದ ಪ್ರಮುಖರು ಬಿಜೆಪಿ ಸಂಘಟನೆಯ ಕಾರ್ಯಕರ್ತರಾಗಿ ನಾಯಕರಾಗಿ ಹೊರಹೊಮ್ಮಬೇಕು. ಗೋವಾದಲ್ಲಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಹಲವಾರು ಕ್ರಿಶ್ಚಿಯನ್ ಮುಖಂಡರುಗಳು ಬಿಜೆಪಿಯ ಶಾಸಕರು ಹಾಗೂ ಮಂತ್ರಿಗಳಾಗಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿಯೂ ಆಗಬೇಕು ಎಂದರು.
ಸಮಾಜದ ಪ್ರಮುಖರಾದ ವಿನ್ಸೆಂಟ್ ರೋಡ್ರಿಗಸ್ ಮಾತನಾಡಿ, ರಾಜ್ಯದಲ್ಲಿ ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್ ಸ್ಥಾಪನೆ ಮಾಡಿದೆ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಎಂದು ನೆನಪಿಸಿದರು. ಕ್ರೈಸ್ತರಿಗೆ ಪ್ರತ್ಯೇಕವಾದ ಬಜೆಟ್ ಮಾಡಿ ನಿಗಮವನ್ನು ಸ್ಥಾಪಿಸಿದ್ದು ಬಿಜೆಪಿ ಸರ್ಕಾರ ಎಂದು ತಿಳಿಸಿದರು.
ಬಿಜೆಪಿಯ ಮುಖಂಡರುಗಳಾದ ಕ್ಲೆಮೆಂಟ್ ರಾಯನ್, ಅರ್ಪುದ ಸ್ವಾಮಿ(ಬಬ್ಬಾ ), ನಿತಿನ್, ಸಿಜೆ ಕುಮಾರ್,ಅಲ್ಫೋನ್, ಮಚ್ಚಾದೋ, ಪರ್ಸಿ ಡಿಸೋಜಾ, ಉರ್ಬನ್ ಫರ್ನಾಂಡಿಸ್, ಸನ್ನಿ ಮಾರ್ಶೀಲಾಮಣಿ, ಮೇಲ್ವಿನ್ ಸಂಜಯ್, ಆಂಟೊ ಜೋಸೆಫ್ ಸಜಯ್ ರೋಷನ್ ಉಪಸ್ಥಿತರಿದ್ದರು.