ಶಿವಮೊಗ್ಗ: ಶುಭಂ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಶ್ರೀಧರ್ ಹೆಗ್ಡೆ ಅವರಿಂದ ನನಗೆ ಅನ್ಯಾಯವಾಗಿದೆ ಎಂದು ಸಂಸ್ಥೆಯಲ್ಲಿ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶಿಲ್ಪಾ ಎನ್. ಆರೋಪಿಸಿದ್ದಾರೆ.
ಮಂಗಳವಾರ ಪ್ರೆಸ್ ಟ್ರಸ್ಟ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷ್ಮಿ ಚಿತ್ರಮಂದಿರ ಎದುರಿನಲ್ಲಿರುವ ಶುಭಂ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಕಳೆದ ೫ ವರ್ಷಗಳಿಂದ ನಾನು ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಈ ಸಂಸ್ಥೆಯು ಸ್ವಸಹಾಯ ಸಂಘಗಳನ್ನು ರಚಿಸುವುದು, ಆ ಮೂಲಕ ಬ್ಯಾಂಕ್ ನಿಂದ ಅವರಿಗೆ ಸಾಲ ಕೊಡಿಸುವ ಕೆಲಸ ಮಾಡುತ್ತಿದೆ. ನಾನೇ ೧೦೦ ಗುಂಪುಗಳನ್ನು ರಚಿಸಿದ್ದೇನೆ. ಜೊತೆಗೆ ಶ್ರೀಧರ ಹೆಗ್ಡೆ ಅವರ ಪತ್ನಿ ಎಲ್.ಐ.ಸಿ. ಏಜೆಂಟ್ ಕೂಡ ಆಗಿದ್ದಾರೆ ಎಂದರು.
ಎಲ್.ಐ.ಸಿ.ಗೆ ಸಂಬಂಧಿಸಿದಂತೆ ನಾನೂ ಕೂಡ ಪ್ರತ್ಯೇಕವಾಗಿ ಕೆಲಸ ಮಾಡುತ್ತೇನೆ. ಸಂಸ್ಥೆಯ ಗ್ರೂಪ್ ನ ಯಾರ ಬಳಿಯೂ ನಾನು ಎಲ್.ಐ.ಸಿ. ಮಾಡಿಸಿಲ್ಲ. ಆದರೆ, ಈ ವಿಷಯವನ್ನೇ ಮುಂದಿಟ್ಟುಕೊಂಡು ಶ್ರೀಧರ ಹೆಗ್ಡೆ ಅವರನ್ನು ನನ್ನನ್ನು ಬೆದರಿಸಿದರಲ್ಲದೇ, ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಕೊಡಿಸಿದ್ದಾರೆ ಎಂದು ಆರೋಪಿಸಿದರು.
ನಾನು ಈ ಬಗ್ಗೆ ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಆದರೆ, ಪೊಲೀಸರು ದೂರು ಸಲ್ಲಿಸಿ ಹಲವು ದಿನಗಳಾದರೂ ನನ್ನ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಿಲ್ಲ. ಕೂಡಲೇ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮತ್ತು ನನಗೆ ಈಗಾಗಲೇ ಅವರ ಕಡೆಯಿಂದ ಬೆದರಿಕೆ ಕೂಡ ಬಂದಿದೆ. ನಾನು ಬೇರೆ ಕಡೆ ಕೆಲಸ ಹುಡುಕಿದರೆ ಅಲ್ಲಿಗೆ ಹೋಗಿ ಇಲ್ಲ, ಸಲ್ಲದ ವಿಷಯ ಹೇಳಿ ಕೆಲಸ ಕೊಡದಂತೆ ತಡೆಯುತ್ತಾರೆ. ಮತ್ತು ಅವರು ಹಲ್ಲೆ ಮಾಡಿದ್ದರಿಂದ ನನ್ನ ಎಡಕಿವಿ, ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿದೆ. ಹೆಣ್ಣಿನ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ ನನಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನೇತ್ರಾ, ಉಮೇಶ್, ನಾಗರಾಜರಾವ್ ಇದ್ದರು.