ಸಾಗರ : ನನ್ನ ಮೇಲೆ ಹಲ್ಲೆ ನಡೆದು ಒಂದು ವರ್ಷವಾಯಿತು. ಅಂದಿನಿಂದ ಇಂದಿನವರೆಗೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಂಪೂರ್ಣ ಕುಗ್ಗಿ ಹೋಗಿದ್ದೇನೆ. ಈ ಹಲ್ಲೆ ನಡೆಸಲು ಪ್ರೇರಣೆ ನೀಡಿರುವ ಶಾಸಕ ಹಾಲಪ್ಪ ಹರತಾಳು ಅವರನ್ನು ಇನ್ನೊಮ್ಮೆ ಶಾಸಕರಾಗಿ ನೋಡುವಂತಾಗಬಾರದು
. ಬಿಜೆಪಿ ವರಿಷ್ಟರು ಯಾವುದೇ ಕಾರಣಕ್ಕೂ ಶಾಸಕ ಹಾಲಪ್ಪ ಹರತಾಳು ಅವರಿಗೆ ಸಾಗರ ವಿಧಾನಸಭಾ ಕ್ಷೇತ್ರದ ಟಿಕೇಟ್ ನೀಡಬಾರದು ಎಂದು ಬ್ರಾಹ್ಮಣ ವೀರಶೈವ ಒಕ್ಕೂಟದ ಪ್ರಮುಖ ಜಗದೀಶ್ ಗೌಡ ಒತ್ತಾಯಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ನಡೆದ ಹಲ್ಲೆಯಿಂದ ನಾನು ತೋಟಕ್ಕೆ ಸಹ ಹೋಗಲು ಆಗುತ್ತಿಲ್ಲ. ಇಂತಹವರು ಜನಪ್ರತಿನಿಧಿಗಳಾದರೆ ದಬ್ಬಾಳಿಕೆ ಹೊರತುಪಡಿಸಿ ಇನ್ನೇನು ಅಭಿವೃದ್ದಿ ಸಾಧ್ಯವಿಲ್ಲ. ಹಿಂದಿನ ಚುನಾವಣೆಯಲ್ಲಿ ನಾನು ಅವರನ್ನು ಗೆಲ್ಲಿಸಲು ಪ್ರಯತ್ನಿಸಿದವರಲ್ಲಿ ಒಬ್ಬ. ನಾನು ಅವರ ವಿರುದ್ದ ಯಾವುದೇ ಹೇಳಿಕೆ ನೀಡದಿದ್ದಾಗ್ಯೂ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಪಕ್ಷ ಯಾವುದೇ ಕಾರಣಕ್ಕೂ ಅವರಿಗೆ ಟಿಕೇಟ್ ಕೊಡದೆ ಬೇರೆಯವರಿಗೆ ಬಿಜೆಪಿ ಟಿಕೇಟ್ ನೀಡಬೇಕು ಎಂದು ಹೇಳಿದರು.
ಒಕ್ಕೂಟದ ಇನ್ನೋರ್ವ ಪ್ರಮುಖರಾದ ಚಂದ್ರಶೇಖರ್ ಮಾತನಾಡಿ, ಎಂಡಿಎಫ್ ಇರುವುದು ಸೊರಬ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಎನ್ನುವುದು ದಾಖಲಾರ್ಹ. ಶಾಸಕ ಹಾಲಪ್ಪ ಹರತಾಳು ಸಾಗರ ಕ್ಷೇತ್ರದ ಶಾಸಕರು. ತಮಗೆ ಸಂಬಂಧವಿಲ್ಲದ ಕ್ಷೇತ್ರಕ್ಕೆ ಬಂದು ಸರ್ವಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಜಗದೀಶ್ ಗೌಡ, ಶ್ರೀಪಾದ ಹೆಗಡೆ ಅವರ ಮೇಲೆ ಹಲ್ಲೆ ಮಾಡಿಸಿದ್ದಾರೆ. ಇಂತಹ ಮನಸ್ಥಿತಿ ಇರುವ ಶಾಸಕ ನಮ್ಮ ಕ್ಷೇತ್ರಕ್ಕೆ ಮತ್ತೊಮ್ಮೆ ಆಯ್ಕೆಯಾಗುವುದು ಬೇಡ. ಹಿಂದಿನ ಚುನಾವಣೆಯಲ್ಲಿ ಹಾಲಪ್ಪ ಗೆಲುವಿಗಾಗಿ ನಾವೆಲ್ಲಾ ಶ್ರಮಿಸಿದ್ದೇವೆ. ಈ ಬಾರಿ ಬಿಜೆಪಿಯಿಂದ ಅವರಿಗೆ ಟಿಕೇಟ್ ಕೊಟ್ಟರೆ ಅವರನ್ನು ಸೋಲಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹಾಲಪ್ಪ ಅವರು ಸಾಗರವನ್ನು ವಿದ್ಯಾಸಾಗರ ಮಾಡುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ. ಬೆಳ್ಳಿಕೊಪ್ಪದಲ್ಲಿ ಶಾಲೆ ಸಮೀಪ ಎಂಎಸ್ಐಎಲ್ ಮದ್ಯದಂಗಡಿ ಮಾಡಲು ಮುಂದಾದಾಗ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಆದರೂ ಶಾಸಕ ಹಾಲಪ್ಪ ಹರತಾಳು ತಮ್ಮ ಬೆಂಬಲಿಗರಿಗೆ ಅಲ್ಲಿ ಮದ್ಯದಂಗಡಿ ಮಾಡಲು ಅವಕಾಶ ಕೊಟ್ಟಿದ್ದಾರೆ. ಆವಿನಹಳ್ಳಿ ಸೇರಿದಂತೆ ಬೇರೆಬೇರೆ ಕಡೆ ಮದ್ಯದಂಗಡಿ ತೆರೆಯಲಾಗಿದೆ. ವಿದ್ಯಾಸಾಗರ ಮಾಡುವ ಉದ್ದೇಶ ಇದ್ದವರು ಈ ರೀತಿ ಮದ್ಯದಂಗಡಿ ತೆರೆಯಲು ಪರವಾನಿಗೆ ಕೊಡಿಸುತ್ತಿರಲಿಲ್ಲ.
ಎಂಡಿಎಫ್ ಗಲಾಟೆ ಸಂದರ್ಭದಲ್ಲಿ ಶಾಸಕರು ಸೇರಿದಂತೆ ಹಲ್ಲೆ ನಡೆಸಿದವರ ವಿರುದ್ದ ದೂರು ನೀಡಲಾಗಿತ್ತು. ಈತನಕ ಶಾಸಕರ ಮೇಲೆ ಎಫ್ಐಆರ್ ದಾಖಲಿಸಿಲ್ಲ. ಪೊಲೀಸರು ಈ ಕೂಡಲೆ ಹಾಲಪ್ಪ ಮೇಲೆ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು. ಗೋಷ್ಟಿಯಲ್ಲಿ ರಜನೀಶ್ ಹೆಗಡೆ ಹಕ್ರೆ ಹಾಜರಿದ್ದರು. (