ನವ ಸಂವತ್ಸರದ ಯುಗಾದಿ ಸಂಭ್ರಮ
ಯುಗಾದಿ ಬಂತು ಸಂತಸ ತಂತು
ನವ ಸಂವತ್ಸರದ ಮಾವು ಬೇವು
ಒಂದುಗೂಡಿ ಹಬ್ಬಕ್ಕೆ ಸ್ವಾಗತಕೋರಿದೆ
ಮುಂಬಾಗಿಲಿನಲ್ಲಿ ಹಸಿರು ತೋರಣ
ಅಂಗಳದಿ ರಂಗೋಲಿ ಚಿತ್ತಾರ ನಲಿಯುತಿದೆll
ಚೈತ್ರ ಮಾಸದ ಮೊದಲ ದಿನ ಪಾಡ್ಯ
ನವ ಸಂವತ್ಸರ ಯುಗಾದಿ ಹಬ್ಬ
ಮನೆಯವರೆಲ್ಲ ಅಭ್ಯಂಜನ ಮಾಡಿ
ಹೊಸ ಉಡುಗೆ ತೊಟ್ಟು
ದೇವರನ್ನು ಪೂಜಿಸಿ ಶ್ರದ್ಧಯಿಂದಲಿll .
ಕಹಿಯನ್ನೆಲ್ಲ ಮರೆತು ಸಿಹಿಯ ಸ್ಮರಿಸುವ
ಸುಖ ದು:ಖಗಳ ಸಂಕೇತವಾಗಿ
ಬೇವು ಬೆಲ್ಲದೊಳು ನೀತಿ ಸಾರುತಿದೆ
ನೋವು ನಲಿವು ಎರಡು ಉಂಟು ಬಾಳಿನಲಿ ಕಾಲಚಕ್ರ ಉರುಳಿ ಹೋಗುತಿಹುದುll
ಜಾತಿ,ಧರ್ಮ,ಭೇದ ತೊರೆದು
ಭಾವೈಕ್ಯತೆಯಲಿ ಒಂದಾಗಿ
ಹೊಸ ಚಿಗುರು ಹಳೇ ಬೇರು ತಂದಿತು
ಯುಗಾದಿ ನವೀನತೆಗೆ ಸಾಕ್ಷಿಯಾಗಿ
ಪರಿಸರ ದೇವತೆಯು ನಸುನಗುತಿಹಳುll
ಭಗವಂತನನ್ನು ಸ್ಮರಿಸುತ್ತಾ
ಬೇವು ಬೆಲ್ಲ ಸವಿಯುತ ಎಲ್ಲರೊಳಂದಾಗಿ ನಗುನಗುತಾ ಬಾಳುವ
ಗಿಡ ಮರಗಳು ಚಿಗುರಿದೆ
ಹೊಸ ವರುಷ ತರಲಿ ಮನಕೆ ಹರುಷll
ಡಾ.ಎನ್.ಆರ್.ಮಂಜುಳ
ನಿವೃತ್ತ ಪ್ರೌಢಶಾಲಾ ಲೇಖಕಿ ಹಾಗೂ ಲೇಖಕಿ
ಶಿವಮೊಗ್ಗ
ಯುಗಾದಿ
ಯುಗಾದಿಯೆಂದರೆ ಜೀವನದಲ್ಲಿ
ಹೊಸ ವರ್ಷದ ಪ್ರಾರಂಭ.
ಹಿಂದಿನ ಕಹಿಯ ಮರೆತು ಮುಂದೆ
ಸಾಗಲು ಇದುವೇ ಆರಂಭ.
ಚೈತ್ರ ಮಾಸದ ಮೊದಲನೆ ದಿನವೇ
ಸಂಭ್ರಮ ತುಂಬಿ ತರುತಿದೆ,
ದುಃಖ ಸುಖವು ಸಮನಾಗಿರಲಿ
ಎಂಬ ತತ್ವವ ಸಾರುತ ಬರುತಿದೆ.
ಮಕ್ಕಳಿಗೆಲ್ಲ ಹಬ್ಬದ ದಿನವೇ
ವಿಶೇಷ ರೀತಿಯ ಅಭ್ಯಂಜನ,
ಯುಗಾದಿಯೆಂದರೆ ಮನೆ ಮುಂದೆ
ತಳಿರು ತೋರಣ ವಿನೂತನ.
ಎಲ್ಲೆಲ್ಲೂ ಬುವಿಯಲೀ ಹೊಸ
ಚಿಗುರು ಚಿಗುರುತಿದೆ,
ಅದುವೇ ಗಿಡಮರಗಳಲಿ ಹೊಸ ಉತ್ಸಾಹ ಚಿಮ್ಮುತಿದೆ.
ಮಾವಿನ ಮರದಿ ಕೋಗಿಲೆಯು ಇಂಪಾದ ಧ್ವನಿಯಲಿ ಹಾಡುತಿದೆ,
ಹೊಂಗೆ ಹೂವ ತೊಂಗಲಲಿ
ಬೃಂಗದ ಸಂಗೀತ ಕೇಳುತಿದೆ.
ಸುಖ ದುಃಖದ ಸಂಕೇತವೇ
ಹಬ್ಬದಿ ಹಂಚುವ ಬೇವುಬೆಲ್ಲ,
ಹೊಸ ಹೊಸ ಉಡುಪು
ಮನೆ ಮಂದಿ ಮಕ್ಕಳಿಗೆಲ್ಲ.
ಜೆ.ಎಲ್.ಲೀಲಾಮಹೇಶ್ವರ
ಕಾರ್ಯದರ್ಶಿ.
ಕ.ಸ.ಗ್ರಾಮೀಣ.ಪ್ರಾ.ಶಾಲಾ
ಶಿಕ್ಷಕರ ಸಂಘ.ಅರಸೀಕೆರೆ.
ಹೊಸತನದ ಯುಗಾದಿ
ತಾಯಿ ಭಾರತಿಗೆ ಹೊಸ ಯುಗದ ಆದಿ
ಭಾರತೀಯರಿಗೆಲ್ಲ ಹೊಸ ವರ್ಷದ ಹರುಷ ತರುವ ಯುಗಾದಿ
ಪ್ರಕೃತಿ ಮಾತೆಯ ಮಡಿಲಿನಲ್ಲಿ ಹೊಸತನ ಬಂದಿದೆ
ಚೈತ್ರ ಮಾಸವಿದು ಗಿಳಿ ಕೋಗಿಲೆಗಳ ಕುಹೂ ಕುಹೂ ಎನ್ನುತ ಹಾಡುವ ಇಂಚರವು
ಕಿವಿಗಳಿಗೆ ಮುದ ನೀಡುವ
ಇಂಪಂತೆ ಬೀಸುವ ತಂಗಾಳಿಯ ತಂಪಂತೆ
ಹೊಸಲಿನಲ್ಲಿ ಹಸಿರು ತೋರಣ
ಅಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರದ ರಂಗವಲ್ಲಿ
ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆ ಹುಟ್ಟು ಗುರು ಹಿರಿಯರನ್ನು ಪೂಜಿಸುವ
ಯುಗಾದಿ ಬಂದಿದೆ
ಚಂದ್ರಮಾನ ಸೌರಮಾನ ಯುಗದ ಹಾದಿಯಲ್ಲಿ ಗ್ರಹಗತಿಯ ಚಲನೆಯಂತೆ ಆಚರಣೆ ಇಲ್ಲಿ
ಹೊಂಗೆಯ ಚಿಗುರೆಲೆಯ ತಂಗಾಳಿಯಲ್ಲಿ
ಮಾವಿನ ಮರದ ಮಿಡಿಗಾಯಿಯ ನೋಟದಲ್ಲಿ
ಬೇವಿನ ಮರದ ಚಿಗುರೆಲೆಯ
ಕುಸುಮದಲ್ಲಿ
ಭೂ ತಾಯಿಯ ಘಮ್ಮೆನ್ನುವ ಮಣ್ಣಿನಲ್ಲಿ
ಹೊಸ ವರ್ಷಕ್ಕೆ ಕೊಂಡೊಯ್ಯುವ ನಮ್ಮೆಲ್ಲರ ಹಬ್ಬ ಬಂದಿದೆ
ಬೇವು ಬೆಲ್ಲವ ಬೆರೆಸಿ ಸಮರಸದ ಭಾವ ಹರಸಿ ಭೇದವಿಲ್ಲದೆ ಎಲ್ಲರಿಗೂ ಹಂಚಿ
ಭಾವೈಕ್ಯತೆ ತೋರುವ ಯುಗಾದಿ ಬಂದಿದೆ ವರುಷದ ಹರುಷ ತಂದಿದೆ
ನಾಗರತ್ನ ಕುಮಾರ್
ಶರಾವತಿ ನಗರ
ಶಿವಮೊಗ್ಗ
“ಯುಗಾದಿಯೆಂದರೆ ಹಬ್ಬದ ಸಡಗರವಷ್ಟೇ ಅಲ್ಲ. ಹೊಸ ವರ್ಷದ ಸಂಭ್ರಮ. ನವ ಸಂತಸ – ಸಂಕಲ್ಪಗಳ ಸಮಾಗಮ. ಹರ್ಷ – ಹಾರೈಕೆಗಳ ಸಂಗಮ. ಈ ಅವಿಸ್ಮರಣೀಯ ದಿನಕೆ, ಅಂತರಾಳದ ಅನಂತ ಶುಭಕಾಮನೆಗಳೊಂದಿಗೆ ಕವನದುಡುಗೊರೆ. ಒಪ್ಪಿಸಿಕೊಳ್ಳಿ..” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಹೊಸವರ್ಷದ ಹಾರೈಕೆ.!
ಕಟ್ಟಿದೆ ಮಾಮರದಿ ತಳಿರು ತೋರಣ ಸಾಲೆ
ಗಿಡಮರದಿ ಚಿಗುರೆಲೆಗಳ ಹಚ್ಚಹಸಿರ ಮಾಲೆ
ಭೂರಮೆಯ ತುಂಬೆಲ್ಲ ನವ ನವೋಲ್ಲಾಸದ ಅಲೆ
ನಿಸರ್ಗ ಬರೆದಿದೆ ರಮ್ಮ ರಮಣೀಯ ಕಬ್ಬ
ಬುವಿ ಬಾನಿಗೂ ಬಂದಿದೆ ಮೊದ ಮೊದಲ ಹಬ್ಬ.!
ಕೇಳುತಿದೆ ಸಂತಸದಿ ಉಲಿವ ಮಧುರ ಕೋಕಿಲಗಾನ
ಸಡಗರದಿ ಹಾಡುತಿಹ ಭೃಂಗ ಸಮೂಹ ಗಾಯನ
ಸಂಭ್ರಮದಿ ನರ್ತಿಸುವ ಹಕ್ಕಿಗಳ ರೆಕ್ಕೆಗಳ ವಾದನ
ಪ್ರಕೃತಿಯಲಿ ಪಲ್ಲವಿಸುತಿದೆ ಮಧು ಮಧುರ ಕಬ್ಬ
ದಿಗ್ದಿಗಂತಗಳಲೂ ಮೂಡಿದೆ ಮೊದ ಮೊದಲ ಹಬ್ಬ.!
ಊರು ಕೇರಿಯೊಳಗೆಲ್ಲ ಮೆಲ್ಲ ಮೈದಳೆದಿದೆ ಸುಗ್ಗಿ
ಮನೆ ಮನೆಗಳೊಳಗೆಲ್ಲ ಚಿಮ್ಮುತಿದೆ ಹರ್ಷ ಹಿಗ್ಗಿ
ಮನಗಳೊಳಗೆಲ್ಲ ಧಾವಿಸಿದೆ ಹೊಸ ಉತ್ಸಾಹ ನುಗ್ಗಿ
ಎದೆ ಎದೆಗಳೆಲ್ಲಾ ಆಗುತಿದೆ ನವಚೈತನ್ಯದ ದಿಬ್ಬ
ಬಂದಿದೆ ಹೊಸವರ್ಷದ ಹೊಸಹರ್ಷದ ಯುಗಾದಿ ಹಬ್ಬ.!
ಬೇವು-ಬೆಲ್ಲವ ಬೆರೆತು ಮೆಲ್ಲನೆ ಬಾಯಿಯ ತುಂಬಿದೆ
ಕಷ್ಟ-ಸುಖಗಳಾ ಸಮ ಸಮನಾಗಿ ಸವಿ ಎನ್ನುತಿದೆ
ನಿಸರ್ಗ ಬರೆಯುತಿದೆ ಕಣಕಣದಿ ನವ ಭಾಷ್ಯ
ತೆರೆಯುತಿದೆ ಜೀವನದ ಪುಟಪುಟದಿ ನವ ಪಠ್ಯ
ಯುಗಾದಿ ಆರಂಭಿಸುತಿದೆ ಹೊಚ್ಚ ಹೊಸ ಅಧ್ಯಾಯ.!
ಹೊಸ ವರ್ಷದ ಪ್ರಪ್ರಥಮ ಹಬ್ಬದೀ ಅಮೃತಘಳಿಗೆ
ನಡೆಸಲಿ ಜೀವ ಜೀವಗಳ ನವ ದಿಕ್ಕಿನೆಡೆಗೆ
ಆರಂಭವಾಗಲಿ ಹೊಸ ಹೊಸತುಗಳ ಹೊಸ ನಡಿಗೆ
ನವ್ಯ ಚೈತನ್ಯ ದಿವ್ಯ ಕಾರುಣ್ಯ ನೀಡಲಿ ನಡೆನುಡಿಗೆ
ಒಲವು ನಲಿವು ಗೆಲುವುಗಳ ವರ್ಷವಾಗಲಿ ಅಡಿಗಡಿಗೆ.!
ಎ.ಎನ್.ರಮೇಶ್. ಗುಬ್ಬಿ.
ಬಾಲ್ಯದ ನೆನಪುಗಳನ್ನು ಬಿಚ್ಚಿಡುವ ಈ ಯುಗಾದಿ ಹಬ್ಬ
ಮಾವಿನ ಮರದಲ್ಲಿ ಚಿಗುರುವ ಎಲೆಗಳು ಹೊಸತನವನ್ನು ಮೂಡಿಸುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ.ಉದುರಿದ ಎಲೆಗಳೇನು ಹೊಸತನಕ್ಕೆ ಹಾದಿ ಮಾಡಿಕೊಡುತ್ತವೋ ಹಾಗೆಯೇ ನಮ್ಮ ಬದುಕಲ್ಲೂ ಸಹ ಉರುಳಿ ಹೋದ ದಿನಗಳ ಬಗ್ಗೆ ನೆನಪು ಮಾಡಿಕೊಂಡರೆ ರೋಮಾಂಚನವಾಗುತ್ತದೆ.ಅಂತಹ ಒಂದು ಹಬ್ಬವೇ ಈ ಯುಗಾದಿ,ಇದು ಹೊಸ ಚೈತನ್ಯವನ್ನು ತುಂಬುತ್ತದೆ.ಹಸಿರೆಲೆಯ ಮೇಲೆ ಕುಳಿತು ಕೂಗುವ ಕೋಗಿಲೆಯ ಇಂಪು ಚಿಗುರೆಲೆಗಳ ಕಂಪು …….
ವರ್ಷಪೂರ್ತಿ ಹೀಗೆಯೇ ಇದ್ದರೂ ಚೆಂದ ಎಂದನಿಸುತ್ತದೆ.ಗೆಲುವು ಸೋಲುಗಳಿಲ್ಲದೆ ಜೀವನ ಪರಿಪೂರ್ಣವಾಗುವುದಿಲ್ಲ.ಹಾಗೆಯೇ ಬಾಲ್ಯ ಯೌವ್ವನ ಮುಪ್ಪು ಇವುಗಳನ್ನು ಅನುಭವಿಸದೆ ಸಾರ್ಥಕ ಅನಿಸುವುದಿಲ್ಲ.ಆಯಾಯ ಕಾಲ ಘಟ್ಟದಲ್ಲಿ ಎಲ್ಲವೂ ಸಾಗಿ ಹೋಗುತ್ತದೆ.ಯುಗಾದಿಯ ನೆನಪುಗಳು ಬಾಲ್ಯದ ಕಡೆ ಎಳೆದೊಯ್ಯುತ್ತದೆ.
ಹಳ್ಳಿಗಳಲ್ಲಿ ಆಚರಿಸುವ ಹಬ್ಬ ಒಂದು ರೀತಿಯ ವಿಶೇಷತೆಯೆನಿಸುತ್ತದೆ ಸಂಭ್ರಮದಿಂದ ಮೂರು ದಿನಗಳ ಕಾಲ ಆಚರಿಸುತ್ತಿದ್ದೆವು.ಹಳ್ಳಿಯ ಸೊಗಡಲ್ಲಿ ಹೊಸತನದ ಹುಮ್ಮಸ್ಸಲ್ಲಿ ಮೈಗೆಲ್ಲ ಎಣ್ಣೆಯನ್ನು ಹಚ್ಚಿಕೊಂಡು ಗೆಳೆಯರ ಜೊತೆ ಆಟ ಆಡುತ್ತಿದ್ದೆವು.ಮೈಯಲ್ಲಿ ಹಚ್ಚಿದ್ದ ಎಣ್ಣೆಗೆ ಆಟದ ಬರದಲ್ಲಿ ಮೈಗೆಲ್ಲ ಮಣ್ಣು ಮೆತ್ತಿರುತ್ತಿತ್ತು.ಬಿದ್ದು ಬಿದ್ದು ನಗುವಷ್ಟು ಸಂದರ್ಭಗಳು ಒದಗಿಬರುತ್ತಿದ್ದವು.ಹಲವಾರು ವೇಷಭೂಷಣಗಳನ್ನು ಹಾಕಿ ಹಾಸ್ಯ ಬೆರೆಸುವ ಎಷ್ಟೋ ಮಂದಿ ಇರುತ್ತಿದ್ದರು.ದೇವಸ್ಥಾನಕ್ಕೆ ಹೊಕ್ಕು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದು.ಸಂಜೆಯ ವೇಳೆಯಲ್ಲಿ ಚಂದ್ರನ ದರ್ಶನ ಪಡೆದ ನಂತರ ಎಳ್ಳು ಬೆಲ್ಲ ಹಂಚುವುದರೊಂದಿಗೆ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿದ್ದೆವು. ಹೋಳಿ ಎರಚಿದಂತೆ ನೀರನ್ನು ಎರಚಿ ಸಂಭ್ರಮಿಸುತ್ತಿದ್ದೆವು.ವರ್ಷದೊಡಕಿನ ದಿನವೂ ತುಂಬಾ ಮಜವಾಗಿಯೇ ಇರುತ್ತಿತ್ತು.ದುಡ್ಡಿನ ಆಟವನ್ನು ಕೂಡ ಆಡುತ್ತಿದ್ದರು. ಗೆಲುವಿಗೋಸ್ಕರ ಆಡದೇ ಇದ್ದರೂ ಈ ವರ್ಷದ ನನ್ನ ಗೆಲುವು ಹೇಗಿದೆ ಎಂದು ಪರೀಕ್ಷೆ ಮಾಡುವಂತಿರುತ್ತಿತ್ತು.
ಇಂತಹ ಸಂಭ್ರಮದ ಹಬ್ಬ ಬಾಲ್ಯದಲ್ಲಿ ಕಳೆದ ಆ ದಿನಗಳು ಖುಷಿ ಕೊಟ್ಟಿದ್ದವು.ಈಗ ನೆನಪಾಗಿವೆ ಅಷ್ಟೆ.ಹಳ್ಳಿಯ ಸೊಗಡನ್ನು ಬಿಟ್ಟು ಪಟ್ಟಣವನ್ನರಸಿ ಒತ್ತಡದ ಬದುಕು ಸಾಗಿದೆ.ಬರೀ ದುಡಿಮೆ ದುಡಿಮೆ ಎನ್ನುವಂತಾಗಿದೆ.ಮಕ್ಕಳು ನಮ್ಮಂತೆ ಬಾಲ್ಯವನ್ನು ಕಳೆಯಲಾಗುತ್ತಿಲ್ಲವಲ್ಲ ಎಂದು ಬೇಸರಿಕೆ ಉಂಟಾಗುತ್ತಿದೆ.ಸೊಗಡು ಸೊಗಡಾಗಿಯೇ ಪುಟಗಳಲ್ಲಿ ಉಳಿಯುವಂತಾಗಿದೆ.ನಗರೀಕರಣ ಹಾಗೂ ಉದ್ಯಮೀಕರಣದಿಂದಾಗಿ ಸಂಪ್ರದಾಯದ ಆಚರಣೆಗಳು ಅಲ್ಲಲ್ಲಿ ಕುಂಟುತ್ತಿವೆ.ಏನೇ ಆಗಲಿ ಸಂಪ್ರದಾಯದ ಹಬ್ಬಹರಿದಿನಗಳು ಇಂದಿನ ಮತ್ತು ಮುಂದಿನ ಪೀಳಿಗೆಗಳಲ್ಲಿ ಸಾಗಬೇಕು.ಅದಕ್ಕಾಗಿ ಎಲ್ಲರಲ್ಲೂ ಸಮಾಧಾನ ಅಗತ್ಯವಾಗಿದೆ.ಬಾಲ್ಯದ ಆ ದಿನಗಳ ಯುಗಾದಿ ಮಕ್ಕಳಲ್ಲೂ ಅನುಭವಿಸುವಂತೆ ಅವಕಾಶ ಸಿಗುವಂತಾಗಬೇಕು.
ಈ.ರವೀಶ ಅಕ್ಕರ
ಗುಮಾಸ್ತ
ರೇವಾ ವಿಶ್ವ ವಿದ್ಯಾಲಯ ಬೆಂಗಳೂರು
ಸಂಸ್ಥಾಪಕ ಅಧ್ಯಕ್ಷರು
ವಿಶ್ವ ಕನ್ನಡ ಕಲಾ ಸಂಸ್ಥೆ