ಶಿವಮೊಗ್ಗ, ಮಾರ್ಚ್ 19:
ತುಂಬಾ ವರುಷಗಳಿಂದ ಕುಂಟುತ್ತಲೇ ಆಗುತ್ತಿದ್ದ, ಅದೂ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಪುಣ್ಯವೆಂಬಂತೆ ನಿರ್ಮಾಣವಾದ ಲೋಕೋಪಯೋಗಿ ಭವನಕ್ಕೆ ಉದ್ಘಾಟನೆ ಭಾಗ್ಯ ದೊರಕಿದೆ.
ಲೋಕೋಪಯೋಗಿ ಇಲಾಖೆ ವತಿಯಿಂದ ಶಿವಮೊಗ್ಗ ನಗರದ ಬಾಲರಾಜ್ ಅರಸ್ ರಸ್ತೆ ಬಳಿ ನೂತನವಾಗಿ ನಿರ್ಮಿಸಲಾಗಿರುವ ‘ಲೋಕೋಪಯೋಗಿ ಭವನ’ದ ಉದ್ಘಾಟನೆಯನ್ನು ನಿನ್ನೆ ಸಂಜೆ ಶಾಸಕರು ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ನೆರವೇರಿಸಿ, ಶುಭ ಕೋರಿದರು. ಸ್ಥಳೀಯ ಶಾಸಕ, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಇಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
ಇನ್ಮುಂದೆ ಶಿವಮೊಗ್ಗ ಜಿಲ್ಲಾ ಕೇಂದ್ರದ ಎಲ್ಲಾ ಲೋಕೋಪಯೋಗಿ ಕಚೇರಿಗಳು ಒಂದೇ ಸೂರಿನಡಿ ಬರುತ್ತವೆ. ಈ ಸಂಕೀರ್ಣ ಕಟ್ಟಡವನ್ನು ಒಟ್ಟು
ರೂ. 23.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ ಈ ಕಚೇರಿಗಳು ಬೇರೆ ಬೇರೆ ಸ್ಥಳಗಳಲ್ಲಿ ಮತ್ತು ಬಾಡಿಗೆ ಕಟ್ಟಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಒಂದೇ ಕಟ್ಟಡದ ಅಡಿಯಲ್ಲಿ ಬರುವಂತೆ ಈ ಕಟ್ಟಡ ಸಂಕೀರ್ಣ ನಿರ್ಮಾಣಗೊಂಡಿರುತ್ತದೆ.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಬಿ.ಟಿ.ಕಾಂತರಾಜು, ಅಧೀಕ್ಷಕ ಇಂಜಿನಿಯರ್ ಕೆ.ಜಿ.ಜಗದೀಶ್, ಕಾರ್ಯಪಾಲಕ ಇಂಜಿನಿಯರ್ ಗಳಾದ ಸಂಪತ್ ಕುಮಾರ್ ಪಿಂಗ್ಳೆ, ಕಿರಣ್ ಎಸ್ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.