ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರನನ್ನೇ ಕೊಲೆ ಮಾಡಿದ್ದವನಿಗೆ ಜೀವಾವಧಿ ಹಾಗೂ ಇತರೆ ನಾಲ್ವರಿಗೆ ೧ ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ, ಶಿವಮೊಗ್ಗದ ೩ ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಸೊರಬ ತಾಲೂಕು ಕೊಲಗುಣಸೆ ಗ್ರಾಮದ ನಿವಾಸಿ ಮಂಜು ಯಾನೆ ಮಂಜುನಾಥ್ (೨೫) ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾ ಗಿದೆ. ಈತನಿಗೆ ೧.೪೦ ಲಕ್ಷ ರೂ. ದಂಡ ವಿಧಿಸಲಾ ಗಿದ್ದು, ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ೬ ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆ ಅನುಭವಿ ಸುವಂತೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಇದೇ ಪ್ರಕರಣದ ಇತರೆ ಆರೋಪಿಗಳಾದ ಶಿಕಾರಿಪುರ ತಾಲೂಕು ಕಣಸೋಗಿ ಗ್ರಾಮದ ನೀಲಮ್ಮ (೪೫), ಮಂಜಪ್ಪ (೫೧), ರವಿ (೨೧) ಹಾಗೂ ಕೊಲಗುಣಸೆ ಗ್ರಾಮದ ರೂಪ (೨೨) ಅವರಿಗೆ ೧ ತಿಂಗಳ ಸಾದಾ ಶಿಕ್ಷೆ ಹಾಗೂ ೩೦ ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಮಾ. ೧೩ ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾದ ಶಾಂತರಾಜ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಕಣಸೋಗಿ ಗ್ರಾಮದ ನಿವಾಸಿ ಬಂಗಾರಪ್ಪ (೪೦) ಕೊಲೆಗೀಡಾ ದವರಾಗಿದ್ದಾರೆ. ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ೧೬-೬-೨೦೧೯ ರಂದು ಸಹೋದರ ಮಂಜುನಾಥ್ ಹಾಗೂ ಇತರರು ಬಂಗಾರಪ್ಪರೊಂದಿಗೆ ಗಲಾಟೆ ಮಾಡಿದ್ದರು.
ಈ ವೇಳೆ ಮಂಜುನಾಥ್ ಕಬ್ಬಿಣದ ರಾಡ್ ನಿಂದ ಬಂಗಾರಪ್ಪ ತಲೆಗೆ ಹೊಡೆದು ಗಾಯಗೊಳಿಸಿದ್ದ. ತದನಂತರ ಬಂಗಾರಪ್ಪರನ್ನು ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ೧೯-೬-೨೦೧೯ ರಂದು ಮೃತಪಟ್ಟಿದ್ದರು.
ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್’ಪೆಕ್ಟರ್ ಬಸವರಾಜ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.