: ಕೆ.ಎಸ್. ಈಶ್ವರಪ್ಪ ಒಬ್ಬ ಮಹಿಷಾಸುರ ಎಂದು ಕೆಪಿಸಿಸಿ ರಾಜ್ಯ ವಕ್ತಾರ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಕಟುವಾಗಿ ಟೀಕಿಸಿದರು. ಹಾಗೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಬ್ಬ ಉತ್ತಮ ಆಡಳಿತಗಾರ ಎಂದು ಹೊಗಳಿದರು.


ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅಭಿವೃದ್ಧಿಯ ಹರಿಕಾರ ಎಂಬುದರಲ್ಲಿ ಎರಡು ಮಾತಿಲ್ಲ. ರಾಜಕಾರಣಕ್ಕೆ ಬಂದಾಗ ಪರಸ್ಪರ ಟೀಕೆಗಳು ಅನಿವಾರ್ಯವಾಗಿರುತ್ತವೆ. ಅದನ್ನು ಹೊರತುಪಡಿಸಿದರೆ ಯಡಿಯೂರಪ್ಪನವರ ಬಗ್ಗೆ ನನಗೆ ಪ್ರೀತಿ ಇದೆ. ಅದರೆ ಬಿಜೆಪಿಯವರು ಇದೇ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿ ಕಣ್ಣೀರು ತರಿಸಿದ್ದಕ್ಕೆ ನೋವು ಇದೆ ಎಂದರು.


ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಕತ್ತಿ ಮಸೆಯುವ ಬಿಜೆಪಿಯ ತಂಡವೇ ಇದೆ. ಸಿ.ಟಿ. ರವಿ, ಸಂತೋಷ್ ಸೇರಿದಂತೆ ಹಲವರಿದ್ದಾರೆ. ಇದರಲ್ಲಿ ಕೆ.ಎಸ್. ಈಶ್ವರಪ್ಪ ಕೂಡ ಒಬ್ಬರು. ಇವರು ಅಮಿತ್ ಶಾ ಅವರನ್ನು ಮೆಚ್ಚಿಸಲು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಹೋಲಿಸುತ್ತಾರೆ. ಎಲ್ಲಿ ಹೋಲಿಕೆ ಇದೆ, ಈ ಈಶ್ವರಪ್ಪ ಒಬ್ಬ ಮಹಿಷಾಸುರ ಇದ್ದಂತೆ. ಇಂತಹ ಹೇಳಿಕೆ ನೀಡಿರುವುದು ನಾಚಿಕೆಗೇಡಿತನ ಎಂದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾಗುತ್ತಿದೆ. ಅದು ಸ್ವಾಗತಾರ್ಹ. ಆದರೆ ಈ ಉದ್ಘಾಟನಾ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆತರಲು ಸಾಹಸ ಪಡುತ್ತಿದ್ದಾರೆ. ಎಲ್ಲಾ ಕಾಲೇಜುಗಳಿಗೆ ಹೋಗಿ ಪ್ರಾಂಶುಪಾಲರ ಬಳಿ ಪ್ರಧಾನ ಮಂತ್ರಿಯವರು ಬರುತ್ತಿದ್ದಾರೆ. ಶಾಲೆಯ ಬಾಗಿಲು ಮುಚ್ಚಿ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕಳುಹಿಸಿ ಎಂದು ಹೇಳುತ್ತಿದ್ದಾರೆ. ಇಂತಹ ಪರಿಸ್ಥಿತಿ ಬಿಜೆಪಿಗೆ ಬರಬಾರದಿತ್ತು. ಇದು ತನಿಖೆಯಾಗಬೇಕು ಎಂದ ಅವರು, ನಮ್ಮ ಎನ್‌ಎಸ್‌ಯುಐ ಘಟಕ ಇದರ ವಿರುದ್ಧ ಹೋರಾಟ ನಡೆಸಲಿದೆ ಎಂದರು.


ಬಿಜೆಪಿ ಸರ್ಕಾರ ಅಲ್ಲೋಲಕಲ್ಲೋಲವಾಗಿದೆ. ಸಾವಿರ ಸಮಸ್ಯೆಗಳು ಹಾಗೆಯೇ ಉಳಿದಿವೆ. ಮಕ್ಕಳ ಸಮವಸ್ತ್ರಕ್ಕೂ ಸರ್ಕಾರದಲ್ಲಿ ಹಣವಿಲ್ಲ. ಐಎಎಸ್, ಐಪಿಎಸ್ ಅಧಿಕಾರಿಗಳು ಇವರದೇ ಸರ್ಕಾರದಲ್ಲಿ ಕಿತ್ತಾಡುತ್ತಿದ್ದರೂ ಸುಮ್ಮನಿದ್ದಾರೆ. ಸಿದ್ದರಾಮಯ್ಯ ಅವರನ್ನು ಬಯ್ಯುವುದು ಬಿಟ್ಟರೆ ಬೇರೆ ಕೆಲಸವೇ ಇಲ್ಲ ಎಂದು ಕಾಣುತ್ತದೆ. ಶರಾವತಿ ಮುಳುಗಡೆ ಸಂತ್ರಸ್ತರ ಕಡೆ ತಿರುಗಿಯೂ ನೋಡಲಿಲ್ಲ. ಶಾಲೆಗಳೆಲ್ಲ ದುರಸ್ತಿಗೆ ಬಂದಿವೆ. ಜನ ಬೇಸತ್ತು ಹೋಗಿದ್ದಾರೆ. ಎಲೆಚುಕ್ಕಿ ರೋಗ ಸಮಸ್ಯೆ ಹಾಗೆಯೇ ಉಳಿದಿದೆ ಎಂದು ಟೀಕಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಾ. ಶ್ರೀನಿವಾಸ ಕರಿಯಣ್ಣ, ಶಂಕರಘಟ್ಟ ರಮೇಶ್, ವೈ.ಹೆಚ್. ನಾಗರಾಜ್, ಜಿ.ಡಿ.ಮಂಜುನಾಥ್, ಬಾಲಾಜಿ, ಮಹೇಂದ್ರ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!