ಪ್ರಾಣಿ ದಯೆ ತೋರುವುದು ಮಾನವೀಯ ಕಾರ್ಯ : ಡಾ.ಅನಿತಾ ಆರ್
ಶಿವಮೊಗ್ಗ, ಫೆ.25:
ಪ್ರಾಣಿಗಳಿಗೆ ಮನುಷ್ಯರಂತೆ ಮಾತನಾಡಲು ಬರುವುದಿಲ್ಲ. ಮಾತನಾಡಬಲ್ಲ ಬುದ್ದಿಜೀವಿಯಾದ ಮಾನವ ಮೂಕ ಪ್ರಾಣಿಗಳಿಗೆ ದಯೆ ತೋರುವುದು ಮಾನವೀಯ ಕಾರ್ಯವಾಗಿದೆ ಎಂದು ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕಿ ಡಾ.ಅನಿತಾ ಆರ್ ಹೇಳಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಶಿವಮೊಗ್ಗ ಜಿಲ್ಲಾ ಪ್ರಾಣಿಪಾಲನಾ ಸಂಘ ಮತ್ತು ಶಿವಮೊಗ್ಗ ಕೇಂದ್ರ ಕಾರಾಗೃಹದ ಸಂಯುಕ್ತಾಶ್ರಯದಲ್ಲಿ ಫೆ.22 ರಂದು ಕೇಂದ್ರ ಕಾರಾಗೃಹದಲ್ಲಿ ಜರುಗಿದ ಪ್ರಾಣಿ ಕಲ್ಯಾಣ ಸಂಬಂಧಿತ ಕಾಯ್ದೆ ಮತ್ತು ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಾಣಿಗಳ ಮೇಲಿನ ದೌರ್ಜನ್ಯ ಅತ್ಯಂತ ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಸಾಕಷ್ಟು ಜನರಿಗೆ ತಿಳುವಳಿಕೆ ಇಲ್ಲ. ತಪ್ಪುಗಳು ನಡೆದು ಹೋದ ಮೇಲೆ ತಿಳಿದಿರಲಿಲ್ಲ ಎಂದು ಹೇಳುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದರೊಂದಿಗೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಮತ್ತು ನಿಯಮಗಳ ಕುರಿತು ಪ್ರತಿಯೊಬ್ಬರಿಗೂ ಸೂಕ್ತ ಅರಿವು ಹೊಂದುವುದು ಅತಿ ಅಗತ್ಯ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಡಿ ಮಾತನಾಡಿ, ಪ್ರಾಣಿಗಳು ತಮ್ಮನು ಪ್ರೀತಿಸಿದವರಿಗೆ ಪ್ರೀತಿಯನ್ನು ತೋರುತ್ತವೆ. ಮಾನವನ ಬದುಕಿನ ಭಾಗವಾಗಿರುವ ಪ್ರಾಣಿಗಳಿಗೆ ದಯೆ, ಅನುಕಂಪ ತೋರಿಸುವುದು ಮಾನವನ ಜವಾಬ್ದಾರಿಯಾಗಿದೆ.
ಪ್ರಾಣಿಗಳಿಗೆ ಹಿಂಸೆ, ಕ್ರೌರ್ಯ, ದೌರ್ಜನ್ಯ ಅನಗತ್ಯವಾದ ಸಂಕಟ ನೀಡುವುದು ಕಾನೂನು ಪ್ರಕಾರ ಅಪರಾಧ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರವು 1960 ರಲ್ಲಿ ಕಾಯ್ದೆಯನ್ನು ಜಾರಿಗೆ ತಂದಿದೆ. ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂಬ ಅಂಶವನ್ನು ಅರಿತು ಪ್ರತಿಯೊಬ್ಬರೂ ಪ್ರಾಣಿ ಪಕ್ಷಿಗಳಿಗೆ ದಯೆ ತೋರುವುದರಿಂದ ಸಮಾಜದಲ್ಲಿ ಅಪರಾಧ ಪ್ರಮಾಣವನ್ನು ತಗ್ಗಿಸಲು ಸಾಧ್ಯ ಎಂದರು.
ಆಯನೂರು ಪಶುವೈದ್ಯರಾದ ಡಾ.ದಯಾನಂದ್, ನಿದಿಗೆಯ ಪಶುವೈದ್ಯರಾದ ಡಾ.ಅರುಣ್ ಮತ್ತು ಶಿವಮೊಗ್ಗದ ಪಶುವೈದ್ಯರಾದ ಡಾ.ರುದ್ರೇಶ್ ಪಿಪಿಟಿ ಪ್ರದರ್ಶನ ಮೂಲಕ ಪ್ರಾಣಿ ಕಲ್ಯಾಣ ಸಂಬಂಧಿತ ಕಾಯ್ದೆ ಮತ್ತು ನಿಯಮಗಳ ಬಗ್ಗೆ ಸಚಿತ್ರ ಮಾಹಿತಿಗಳನ್ನು ನೀಡಿದರು.
ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಶಿವಾನಂದ ಆರ್ ಶಿವಾಪೂರ, ಜೈಲರ್ಗಳಾದ ಮಹೇಶ್ ಜಿಎಂ, ಅನಿಕುಮಾರ್ ಎಸ್ ಎಸ್, ಸಂಸ್ಥೆಯ ಶಿಕ್ಷಕರಾದ ಗೋಪಾಲಕೃಷ್ಣ, ಲೀಲಾ ಎಸ್ ಎನ್ ಇತರರು ಇದ್ದರು.