ಶಿವಮೊಗ್ಗಏಳನೇ ವೇತನ ಆಯೋಗದಿಂದ ಮಧ್ಯಂತರ ವರದಿಯನ್ನು ಪಡೆದು, ಶೇ.೪೦ರಷ್ಟು ವೇತನ ಹೆಚ್ಚಿಸುವ ಬಗ್ಗೆ ಅಧೀಕೃತ ಆದೇಶ ಹೊರಡಿಸುವಂತೆ ಒತ್ತಾಯಿಸಿ, ರಾಜ್ಯ ಸರ್ಕಾರಿ ನೌಕರರ ಸಂಘ ನೀಡಿರುವ ಅನಿರ್ಧಿಷ್ಠಾವಧಿ ಮುಷ್ಕರವನ್ನು ಬೆಂಬಲಿಸುವುದರ ಜೊತೆಗೆ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ರಾಜ್ಯ ಸರ್ಕಾರಿ ನೌಕರರಲ್ಲಿ ಮನವಿ ಮಾಡಿದ್ದಾರೆ.
ಮುಷ್ಕರದ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು ಮೊನ್ನೆ ಬೆಂಗಳೂರಿನಲ್ಲಿ ನಡೆದ ನೌಕರರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಮಾರ್ಚ್ ೦೧ರಿಂದ ಆರಂಭಗೊಳ್ಳಲಿರುವ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಹಾಗೂ ಹಂತದ ಅಧಿಕಾರಿ-ಸಿಬ್ಬಂಧಿಗಳು ಸಂಘವು ತೆಗೆದುಕೊಂಡಿರುವ ತೀರ್ಮಾನದಂತೆ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರದಲ್ಲಿ ಭಾಗಿಯಾಗುವಂತೆ ಅವರು ಕರೆ ನೀಡಿದ್ದಾರೆ.
ಈ ಹಿಂದೆ ಅನೇಕ ಬಾರಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು ಎಂದು ತಿಳಿಸಿರುವ ಅವರು, ಪಂಜಾಬ್, ರಾಜಸ್ತಾನ, ಜಾರ್ಖಂಡ್, ಹಿಮಾಚಲಪ್ರದೇಶ, ಛತ್ತೀಸ್‌ಘಡ ರಾಜ್ಯಗಳ ಮಾದರಿಯಲ್ಲಿ ನೂತನ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ, ಹಳೆಯ ಪಿಂಚಣಿ ವ್ಯವಸ್ಥೆಯನ್ನು ಯಥಾವತ್ತಾಗಿ ಜಾರಿಗೊಳಿಸಿ, ನೌಕರರ ಹಿತ ಕಾಪಾಡುವಂತೆ ಮನವಿ ಮಾಡಿರುವುದಾಗಿಯೂ ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿ ಸಂಘವು ಮುಷ್ಕರಕ್ಕೆ ಕರೆ ನೀಡಿದ್ದು, ಸಮಸ್ತ ರಾಜ್ಯ ಸರ್ಕಾರಿ ನೌಕರರು-ಅಧಿಕಾರಿಗಳು ಕರ್ತವ್ಯಕ್ಕೆ ಗೈರುಹಾಜರಾಗಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಬೆಂಬಲಿಸುವಂತೆ ಹಾಗೂ ನೌಕರರ ಭವಿಷ್ಯದ ಬದುಕಿಗಾಗಿ ಕರ್ತವ್ಯಕ್ಕೆ ಗೈರು ಹಾಜರಾಗುವಂತೆ ಅವರು ನೌಕರರಲ್ಲಿ ಮನವಿ ಮಾಡಿದ್ದಾರೆ.
- ರಾಜ್ಯ ಸರ್ಕಾರಿ ನೌಕರರ ಸಂಘವು ಕರೆ ನೀಡಿರುವ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘವು ಬೆಂಬಲಿಸಲಿದೆ. ಅಂತೆಯೇ ರಾಜ್ಯದ ಎಲ್ಲಾ ಪ್ರೌಢಶಾಲೆಗಳ ಶಿಕ್ಷಕರು ಕರ್ತವ್ಯಕ್ಕೆ ಗೈರು ಹಾಜರಾಗಿ ಮುಷ್ಕರವನ್ನು ಬೆಂಬಲಿಸುವಂತೆ ಮನವಿ ಮಾಡಲಾಗಿದೆ. _ ಬಿ.ಸಿದ್ದಬಸಪ್ಪ, ರಾಜ್ಯಾಧ್ಯಕ್ಷರು, ಪ್ರೌಢಶಾಲಾ ಸಹಶಿಕ್ಷಕರ ಸಂಘ, ಬೆಂಗಳೂರು.
- ನೌಕರರ ನ್ಯಾಯೋಚಿತವಾಗಿರುವ ಬೇಡಿಕೆಯನ್ನು ಈಡೇರಿಸುವಲ್ಲಿ ನಿರ್ಲಕ್ಷ್ಯ ಭಾವ ತಾಳಿರುವ ಹಾಗೂ ಬಜೆಟ್‌ನಲ್ಲಿ ವಿಷಯವನ್ನು ಪ್ರಸ್ತಾಪಿಸದಿರುವುದನ್ನು ಪ್ರತಿಭಟಿಸಿ, ಜಿಲ್ಲಾ ನಿವೃತ್ತ ನೌಕರರ ಸಂಘವು ಮುಷ್ಕರಕ್ಕೆ ಬೆಂಬಲ ಘೋಷಿಸಿದೆ. -ಚಂದ್ರಶೇಖರ್, ಅಧ್ಯಕ್ಷರು, ನಿವೃತ್ತ ನೌಕರರ ಸಂಘ, ಶಿವಮೊಗ್ಗ.
- ಸಿಬ್ಬಂಧಿಗಳ ಕೊರತೆಯ ನಡುವೆಯೂ ಕೊರೋನ ಸೋಂಕು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದ್ದಾಗ್ಯೂ, ಮನೆ, ಕುಟುಂಬ ಎಲ್ಲವನ್ನು ತೊರೆದು ಸೇವೆ ಸಲ್ಲಿಸಿದ ನೌಕರರ ಬೇಡಿಕೆಗೆ ಸ್ಪಂದಿಸದ ಹಾಗೂ ಏಳನೇ ವೇತನ ಆಯೋಗದ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದ ಆಡಳಿತಾರೂಢ ಸರ್ಕಾರಕ್ಕೆ ನೌಕರರ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ಬೆಂಬಲಿಸಲಿದೆ. – ಜಿಲ್ಲಾ ಅಧ್ಯಕ್ಷರು, ಪ್ರಭಾಕರ್, ಆರೋಗ್ಯ ಇಲಾಖೆ ನೌಕರರ ಸಂಘ, ಶಿವಮೊಗ್ಗ.