ಶಿವಮೊಗ್ಗ, ಫೆ.೧೮:
ಶಿವಮೊಗ್ಗದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಬರುವ ಫೆ.೨೭ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಲಿದ್ದು, ಇದಕ್ಕೆ ಶಿವಮೊಗ್ಗ ಸಂಸದರು, ಯುವಕರೂ ಆದ ಬಿ.ವೈ.ರಾಘವೇಂದ್ರ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿರಂತರ ಪ್ರಯತ್ನದ ಫಲವೇ ಕಾರಣವೆಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸ್ಥಳೀಯ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಂದು ಬೆಳಗ್ಗೆ ಶಿವಮೊಗ್ಗ ಸೋಗಾನೆ ವ್ಯಾಪ್ತಿಯಲ್ಲಿ ನಿರ್ಮಾಣದ ಸಂಪೂರ್ಣ ಕೊನೆಯ ಹಂತದ ಕಾಮಗಾರಿಯಲ್ಲಿರುವ ವಿಮಾನ ನಿಲ್ದಾಣಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರು ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಕಾರ್ಯಕ್ರಮದ ರೂಪುರೇಷಗಳನ್ನು ಚರ್ಚಿಸಿದ ಬಳಿಕ ಫೆ.೨೭ರ ಮೋದಿ ಕಾರ್ಯಕ್ರಮದ ಸಭಾಂಗಣ ನಿರ್ಮಿಸುವ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಮಾದ್ಯಮಗಳೊಂದಿಗೆ ಅವರು ಮಾತನಾಡಿದರು.
ಪ್ರಧಾನಿ ವಿಶ್ವ ನಾಯಕ ನರೇಂದ್ರ ಮೋದಿ ಅವರು ಅಂದು ಸುಮಾರು ೫ ಸಾವಿರಕ್ಕೂ ಹೆಚ್ಚು ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ೭೭೫ ಎಕರೆ ಭೂಮಿಯಲ್ಲಿ ನಿರ್ಮಾಣವಾಗಿರುವ ರಾಷ್ಟ್ರದ ಅತ್ಯುನ್ನತ ಮಟ್ಟದ ವಿಮಾನ ನಿಲ್ದಾಣ, ಸ್ಮಾರ್ಟ್‌ಸಿಟಿ, ರೈಲ್ವೆ ಕಾಮಗಾರಿ ಸೇರಿದಂತೆ ವಿವಿಧ ಕಾಮಗಳನ್ನು ಉದ್ಘಾಟಿಸಲಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯುನ್ನತ ಮಟ್ಟಕ್ಕೆ ತರುವ ನಿಟ್ಟಿನಲ್ಲಿ ಸಂಸದರು ಮಾಡಿರುವ ಕಾರ್ಯಗಳನ್ನು ಮುಕ್ತವಾಗಿ ಪ್ರಶಂಸಿದ ಈಶ್ವರಪ್ಪ ಅವರು ಕೈಗಾರಿಕೆ ಪ್ರದೇಶ ಬೆಳೆಯುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಪರ್ವ ಆರಂಭಗೊಳ್ಳಲಿದೆ ಎಂದು ಬಿ.ವೈ.ರಾಘವೇಂದ್ರ ಹಾಗೂ ಯಡಿಯೂರಪ್ಪ ಅವರನ್ನು ಪ್ರಶಂಸಿದರು.
ನನ್ನ ವಿಧಾನಸಭಾ ಕ್ಷೇತ್ರದ ಸೋಗಾನೆ ವಿಮಾನ ನಿಲ್ದಾಣಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನೇ ನಾಮಕರಣ ಮಾಡಬೇಕು. ಯಾವುದೇ ಕಾರಣಕ್ಕೂ ಬದಲಿಸುವುದು ಬೇಡ. ಇಡೀ ಶಿವಮೊಗ್ಗ ಜಿಲ್ಲೆಯ ಹಾಗೂ ನಗರದ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹಾಗೂ ಇಂದಿನವರೆಗೆ ಪ್ರಯತ್ನಿಸುತ್ತಿರುವ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಇದಕ್ಕೆ ಸೂಕ್ತ. ಅವರ ಶ್ರಮಕ್ಕೆ ನಾವು ಸಲ್ಲಿಸುವ ಗೌರವ.
-ಕೆ.ಬಿ.ಅಶೋಕ್‌ನಾಯ್ಕ್, ಶಾಸಕರು, ಶಿವಮೊಗ್ಗ ಗ್ರಾಮಾಂತರ.
ಈ ಸಂದರ್ಭದಲ್ಲಿ ಶಾಸಕ ಎಸ್.ರುದ್ರೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಪ್ರಮುಖರಾದ ಜ್ಯೋತಿ ಪ್ರಕಾಶ್, ಪವಿತ್ರರಾಮಯ್ಯ, ಚನ್ನಬಸಪ್ಪ, ಸುರೇಖಾ ಮುರುಳೀಧರ್, ಜ್ಞಾನೇಶ್ವರ್, ಸೂಡಾ ಅಧ್ಯಕ್ಷ ನಾಗರಾಜ್, ನಿವೃತ್ತ ಅಧೀಕ್ಷಕ ಕಾಂತರಾಜ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಮೇಘರಾಜ್ ಹಾಗೂ ಇತರರಿದ್ದರು.
ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರನ್ನೆ ಇಡಿ:
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನೆ ಇಡಬೇಕೆಂಬುದು ನನ್ನ ಆಶಯವಾಗಿದೆ. ಹಿಂದೆ ಮೊದಲು ಈ ವಿಷಯವನ್ನು ಬೃಹತ್ ಸಮಾವೇಶದಲ್ಲಿ ನಾನು ಪ್ರಸ್ತಾಪಿಸಿದ್ದೆ. ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿದ್ದೆವು. ಯಡಿಯೂರಪ್ಪ ಅವರ ದೊಡ್ಡ ಗುಣ. ನನ್ನ ಹೆಸರು ಬೇಡ ಕುವೆಂಪು ಹೆಸರನ್ನು ಇಡಿ ಎಂದು ಹೇಳುತ್ತಿದ್ದಾರೆ. ಈಗಲೂ ಹೆಸರಿನ ನಿರ್ಧಾರವಾಗಿಲ್ಲ. ದಯಮಾಡಿ ಶಿವಮೊಗ್ಗದ ಅಭಿವೃದ್ಧಿಯ ಹರಿಕಾರ, ವಿಮಾನ ನಿಲ್ದಾಣದ ಆಶಯ ಹೊತ್ತು ನಿರಂತರವಾಗಿ ಶ್ರಮಿಸಿದ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಇಡಬೇಕೆಂಬುದು ನನ್ನ ವಿನಂತಿಯ ಒತ್ತಾಯ
-ಕೆ.ಎಸ್.ಈಶ್ವರಪ್ಪ, ಶಾಸಕರು.