ಶಿವಮೊಗ್ಗ,ಜ.31:
ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ನಗರದ ರಸ್ತೆಗಳಲ್ಲಿ, ವೃತ್ತಗಳಲ್ಲಿ, ಬಡಾವಣೆಗಳಲ್ಲಿ ಬೀಡಾಡಿ ಕುದುರೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇವುಗಳು ರಸ್ತೆ ಮತ್ತು ವೃತ್ತಗಳಲ್ಲಿ ಅಡ್ಡಾ ದಿಡ್ಡಿ, ತಿರುಗಾಡುವುದು, ಮಲಗುವುದು, ಸಾರ್ವಜನಿಕರ ಮೇಲೆ ನುಗ್ಗುವುದು ಹಾಗೂ ವಾಹನಗಳಿಗೆ ಅಡ್ಡಿ ಬರುತ್ತಿರುವುದರಿಂದ ಅವಘಾತಗಳು ಮತ್ತು ಸಾರ್ವಜನಿಕ ಉಪದ್ರವದ ಬಗ್ಗೆ ಅನೇಕ ದೂರುಗಳು ಬರುತ್ತಿದ್ದು, ಈ ಹಿಂದೆ ಅನೇಕ ಬಾರಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ ಮಾಲೀಕರು/ ವಾರಸುದಾರರಿಗೆ ತಮ್ಮ ಕುದುರೆಗಳನ್ನು ಸುಪರ್ದಿಗೆ ತೆಗೆದುಕೊಳ್ಳಲು ಪಾಲಿಕೆ ಆಯುಕ್ತರು ನೀಡಿದ್ದ ತಿಳುವಳಿಕೆ ಅವಧಿ ಮುಗಿದಿದೆ. ಇನ್ಮುಂದೆ ತಪ್ಪಗಳೇನಿದ್ದರೂ ಬೀಡಾಡಿ ಕುದುರೆ ಮಾಲಿಕರದಾಗಿರುತ್ತೆ.
ಈ ಹಿಂದೆಯೇ ಪಾಲಿಕೆ ಈ ಕುದುರೆಗಳನ್ನು ಮಾಲಿಕರು ಸುಪರ್ದಿಗೆ ಪಡೆಯದಿದ್ದಲ್ಲಿ ಆಸಕ್ತಿಯುಳ್ಳ ಸಂಘ ಸಂಸ್ಥೆಗಳು ಅಥವಾ ಆ ಬೀಡಾಡಿ ಕುದುರೆಗಳನ್ನು ಸಾಕಿ ಸಲಹಿ ಉಪಯೋಗ ಪಡೆಯುವಂತ ಆಸಕ್ತಿಯುಳ್ಳ ವಿವಿಧ ಯೋಜನೆಗಳನ್ನು ಉಳ್ಳಂತ ಸಾರ್ವಜನಿಕರು ಮುಂದೆ ಬಂದಲ್ಲಿ ಕುದುರೆಗಳನ್ನು ನೀಡುವುದಾಗಿ ಪಕಟಣೆ ಹೊರಡಿಸಲಾಗಿತ್ತು,
ಆದಾಗ್ಯೂ ಬಿಡಾಡಿ ಕುದುರೆಗಳು, ಕುದುರೆಯ ಮರಿಗಳು, ರೋಗಗ್ರಸ್ತ ಹಾಗೂ ಅಂಗವಿಕಲ ಕುದುರೆಗಳು ರಸ್ತೆಗಳಲ್ಲಿ ಓಡಾಡುತ್ತಿದ್ದು ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯುಂಟಾಗುತ್ತಿದ್ದು ಈ ಸಂಬಂಧ ಈಗಾಗಲೇ ಹಲವಾರು ಸಾರ್ವಜನಿಕ ದೂರುಗಳು ನಗರಪಾಲಿಕೆಯಲ್ಲಿ ಸ್ವೀಕೃತವಾಗಿರುತ್ತೆ.
ಕೆಲವು ಎನ್ಜಿಓ ಗಳು/ಸ್ವಯಂ ಸೇವಾ ಸಂಸ್ಥೆಗಳು/ಏಜೆನ್ಸಿಗಳು ಈ ಬೀಡಾಡಿ ಕುದುರೆಗಳನ್ನು ಉಚಿತವಾಗಿ ತಮ್ಮ ವಶಕ್ಕೆ ತೆಗೆದುಕೊಂಡು ಸಾಗಿಸಲು ಅನುಮತಿ ನೀಡಿದಲ್ಲಿ ಅವುಗಳನ್ನು ಬಳಸಿಕೊಂಡು ಯಾಂತ್ರೀಕೃತವಾಗಿ ಬ್ಯಾಟರಿ ಚಾಲಿತ ಯಂತ್ರವನ್ನು ಬಳಸಿ, ವ್ಯವಸಾಯ ಕ್ಷೇತ್ರಕ್ಕೆ ಬಳಸಿಕೊಳ್ಳುವುದು, ಸಾಗಾಣಿಕೆ ಕ್ಷೇತ್ರಕ್ಕೆ ಬಳಸಿಕೊಳ್ಳುವುದು ಇತ್ಯಾದಿ ತೋಟದಲ್ಲಿ ಜೀವಾಮೃತವನ್ನು ಸಾಗಿಸುವುದು ಹಾಗೂ ಇತರೆ ಕೆಲಸಗಳಿಗೆ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದಾಗಿ ಮನವಿಯನ್ನು ಸಲ್ಲಿಸಿರುತ್ತವೆ.
ಈ ಪ್ರಸ್ತಾವನೆಗೆ ಕೇಂದ್ರ ಆಹಾರ ಸಂಶೋಧನ ಕೇಂದ್ರ ಮೈಸೂರು ಹಾಗೂ ರಾಷ್ಟ್ರೀಯ ತೋಟಗಾರಿಕ ಮಿಷನ್ ಬೆಂಗಳೂರು ಇವರ ಮಾರ್ಗದರ್ಶನ ಪಡೆಯಲಾಗಿದೆ, ಈ ಎನ್ಜಿಓ ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಸಾಕಷ್ಟು ಪರಿಣಿತಿ ಹೊಂದಿರುವುದಾಗಿ ಪ್ರತ್ಯಕ್ಷವಾಗಿ ನಡೆದಂತಹ ಹಲವಾರು ಸಭೆಗಳಲ್ಲಿ ಮತ್ತು ಹಲವು ಪ್ರಸ್ತಾವನೆಗಳಲ್ಲಿ ತಿಳಿದುಬಂದಿರುತ್ತದೆ.
ಅಂತಿಮವಾಗಿ ಮತ್ತೊಮ್ಮೆ ಎಲ್ಲಾ ಶಿವಮೊಗ್ಗದ ನಾಗರಿಕರಿಗೆ ಅಥವಾ ಬೀಡಾಡಿ ಕುದುರೆಗಳ ಮಾಲೀಕತ್ವವುಳ್ಳಂತ ಯಾರಾದರೂ ವಾರಸುದಾರರಿದ್ದಲ್ಲಿ ಕಡ್ಡಾಯವಾಗಿ ಈ ಪ್ರಕಟಣೆಯ 7 ದಿನಗಳೊಳಗಾಗಿ ತಮ್ಮ ಕುದುರೆಗಳನ್ನು ಸುಪರ್ದಿಗೆ ಪಡೆಯತಕ್ಕದ್ದು. ಇಲ್ಲವಾದಲ್ಲಿ ಕಟ್ಟು ನಿಟ್ಟಾಗಿ ಸದರಿ ಕುದುರೆಗಳನ್ನು ಬಿಡಾಡಿ ಕುದುರೆಗಳೆಂದು ಪರಿಗಣಿಸಿ ಸಾರ್ವಜನಿಕ ಉಪಟಳವೆಂದು ಪರಿಗಣಿಸಿ ಕರ್ನಾಟಕ ಕಾರ್ಪೋರೇಷನ್ ಕಾಯ್ದೆಯ ವಿಧಿಗಳ ಅನುಸಾರ ಆಯುಕ್ತರಿಗೆ ದತ್ತವಿರುವ ಅಧಿಕಾರವನ್ನು ಚಲಾಯಿಸಿ ಬೀಡಾಡಿ ಕುದುರೆಗಳನ್ನು ಯಾವುದೇ ಮುನ್ಸೂಚನೆ ಅಥವಾ ತಿಳುವಳಿಕೆ ನೀಡದೆ ಸೂಕ್ತ ಎನ್ಜಿಓಗಳ ವಶಕ್ಕೆ ನೀಡುವಂತೆ ನಿಯಾಮಾನುಸಾರ ಕ್ರಮಗಳನ್ನು ಜರುಗಿಸಲಾಗುವುದೆಂದು ಮತ್ತೊಮ್ಮೆ ಸಾರ್ವಜನಿಕ ಪ್ರಕಟಣೆಯ ಮೂಲಕ ತಿಳಿಯಪಡಿಸಿತ್ತು. ಈ ಅವಧಿ ಮುಗಿದಿದೆ..
ಬೀಡಾಡಿ ಕುದುರೆಗಳಿಗೆ ಸಂಬಂಧಪಟ್ಟಂತ ವಾರಸುದಾರರಿದ್ದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯ ಪಶುಸಂಗೋಪನ ಅಧಿಕಾರಿಗಳು ಮೊ.9886326268 ವರನ್ನು ಸಂಪರ್ಕಿಸಿ, ತಮ್ಮ ವಿವರಗಳನ್ನು ನೀಡಬಹುದಿತ್ತು ಅಥವಾ ಇಮೇಲ್ healthcitycorporation@gmail.com ವಿಳಾಸಕ್ಕೆ ತಮ್ಮ ದೂರುಗಳನ್ನು ದಾಖಲಿಸಬಹುದಾಗಿತ್ತು ಎಂದು ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದರು.
ಇಲ್ಲಿಯವರೆಗೆ ಈ ಸೂಚನೆಯನ್ನು ಪಾಲಿಸದೆ ಇದ್ದಲ್ಲಿ ಪಾಲಿಕೆ ಬೀಡಾಡಿ ಕುದುರೆಗಳ ಮಾಲೀಕರ ಜವಾಬ್ದಾರಿಯನ್ನು ಹೊರುವುದಿಲ್ಲ. ಇನ್ನು ಮುಂದೆ ಈ ಬೀಡಾಡಿ ಕುದುರೆಗಳನ್ನು ವ್ಯವಸ್ಥಿತವಾಗಿ ಅನ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಯೋಜನೆಗಳಿಗೆ ವರ್ಗಾಯಿಸಲಾಗುತ್ತದೆ. ಅಂತಿಮ ಗಡುವು ಮುಗಿದಿರುತ್ತದೆ ಎಂದು ಪಾಲಿಕೆ ತಿಳಿಸಿದೆ