ಅಭಿವೃದ್ದಿ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದು, ಕ್ಷೇತ್ರದ ಜನರು ಇದಕ್ಕೆ ಕಿವಿಗೊಡಬಾರದು. ಎರಡು ಬಾರಿ ಶಾಸಕರಾಗಿದ್ದಾಗ ವಿಧಾನಸಭೆಯಲ್ಲಿ ಒಂದೂ ಮಾತನಾಡದ ಗೋಪಾಲಕೃಷ್ಣ ಬೇಳೂರಿಗೆ ಅಭಿವೃದ್ದಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.
ಇಲ್ಲಿನ ಮಾರಿಕಾಂಬಾ ದೇವಸ್ಥಾನ ಎದುರು ಬುಧವಾರ ಬಿಜೆಪಿ ವತಿಯಿಂದ ಗಣಪತಿ ಕೆರೆ ಅಭಿವೃದ್ದಿಗೆ ಅಪಸ್ವರ ಎತ್ತಿರುವ ಕಾಂಗ್ರೇಸ್ ಧೋರಣೆಯನ್ನು ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಪಾಪದ ಕೊಡ ತುಂಬಿದೆ. ಅವರಿಗೆ ಸಾಗರ ಕ್ಷೇತ್ರದಿಂದ ಟಿಕೇಟ್ ಸಿಗುವುದಿಲ್ಲ ಎಂದು ಭವಿಷ್ಯ ನುಡಿದರು.
ಎರಡು ಬಾರಿ ಶಾಸಕರಾಗಿದ್ದಾಗ ಹೈದರಬಾದ್, ಗೋವಾಕ್ಕೆ ಹೋಗಿರುವುದೇ ಬೇಳೂರು ಸಾಧನೆಯಾಗಿದೆ. ಹಾಲಪ್ಪ ಅವರನ್ನು ಬೈದರೆ ನಿಮ್ಮನ್ನು ಗುರುತಿಸುತ್ತಾರೆ ಎಂದು ಯಾರೋ ಹೇಳಿದ ಮಾತಿಗೆ ಕಿವಿಗೊಟ್ಟು ಬೇಳೂರು ಅನಗತ್ಯ ಟೀಕೆ ಮಾಡುತ್ತಿದ್ದಾರೆ. ನರೇಂದ್ರ ಮೋದಿ, ಯಡಿಯೂರಪ್ಪ, ಬಿ.ವೈ.ರಾಘವೇಂದ್ರ, ಈಶ್ವರಪ್ಪ, ಕಾಗೋಡು ತಿಮ್ಮಪ್ಪ ಅವರಿಗೆ ಬೈದಿರುವ ಗೋಪಾಲಕೃಷ್ಣ ಬೇಳೂರಿಗೆ ಕಾಂಗ್ರೇಸ್ನಲ್ಲಿ ಟಿಕೇಟ್ ಸಿಗುವುದಿಲ್ಲ ಎನ್ನುವುದು ನಿಶ್ಚಿತ. ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ರಾಜಕೀಯದಲ್ಲಿ ಅಪ್ರಸ್ತುವಾಗುವ ದಿನ ಹತ್ತಿರ ಬಂದಿದೆ ಎಂದರು.
ಗಣಪತಿ ಕೆರೆ ಕೊಳಚೆ ನೀರಿನಿಂದ ತುಂಬಿ ಹೋಗಿತ್ತು. ಇದೀಗ ಗಣಪತಿ ಕೆರೆ ಸಮೃದ್ದವಾಗಿದ್ದು ಗಣಪತಿ ಕೆರೆಯಲ್ಲಿ ಸಾಗರಾರತಿ ಮಾಡಬಾರದು ಎನ್ನುವ ಕಾರಣಕ್ಕೆ ಕೆಲವರು ಷಡ್ಯಂತ್ರ ರೂಪಿಸುತ್ತಿದ್ದಾರೆ. ಕೊಚ್ಚೆಯನ್ನೆ ಬಯಸುವ ಮನಸ್ಸುಗಳು ಮಾಡಿದ್ದ ಪ್ರತಿಭಟನೆಯಲ್ಲಿ ವಿದ್ಯಾವಂತೆ ಡಾ. ರಾಜನಂದಿನಿ ಕಾಗೋಡು, ಸಮಾಜವಾದಿ ಹೋರಾಟಗಾರ ಬಿ.ಆರ್.ಜಯಂತ್ ಪಾಲ್ಗೊಂಡಿರುವುದು ದುರುದೃಷ್ಟಕರ. ಕೆರೆ ಕೋಡಿ ನಿರ್ಮಾಣ ಸಂದರ್ಭದಲ್ಲಿ ಅಲ್ಪಸ್ವಲ್ಪ ಕೊಳಚೆ ನೀರು ಸೇರುವುದು ಮಾಮೂಲಿ. ಇನ್ನು ಹದಿನೈದು ದಿನದ ನಂತರ ಕೆರೆಯನ್ನು ನೋಡಿ, ಕೊಳಚೆ ನೀರು ಸೇರಿದರೆ ಕಾಂಗ್ರೇಸ್ ಪ್ರತಿಭಟನೆ ಮಾಡಲಿ. ಪೌರಾಯುಕ್ತ ನಾಗಪ್ಪ ಅವರನ್ನು ವಾಚಾಮಗೋಚರ ಬೈದಿದ್ದು, ಮಹಿಳಾ ಕೆ.ಎ.ಎಸ್. ಅಧಿಕಾರಿ ಬಗ್ಗೆ ಅಸಡ್ಡೆಯಾಗಿ ವರ್ತಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಕಾಗೋಡು ತಿಮ್ಮಪ್ಪ ಅವರು ಭೀಷ್ಮರಂತೆ ಕೈಲಾಗದೆ ನೋಡುತ್ತಾ ನಿಂತಿದ್ದಾರೆ ಎಂದರು.
ಎಂ.ಎಸ್.ಐ.ಎಲ್. ಪರವಾನಿಗೆ ಕೊಟ್ಟಿದ್ದರೆ ರಾಜಕೀಯ ನಿವೃತ್ತಿ : ಸಾಗರದಲ್ಲಿ ನಾನು ಶಾಸಕನಾದ ಮೇಲೆ ಹೊಸ ಎಂ.ಎಸ್.ಐ.ಎಲ್. ಮಳಿಗೆಗೆ ಪರವಾನಿಗೆ ನೀಡಿಲ್ಲ. ಒಂದೊಮ್ಮೆ ನನ್ನ ಅವಧಿಯಲ್ಲಿ ಎಂ.ಎಸ್.ಐ.ಎಲ್. ಮದ್ಯ ಮಳಿಗೆಗೆ ಪರವಾನಿಗೆ ನೀಡಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ತಾಲ್ಲೂಕಿನಲ್ಲಿ ೬ ಎಂ.ಎಸ್.ಐ.ಎಲ್. ಮದ್ಯಮಳಿಗೆ ಕಾರ್ಯನಿರ್ವಹಿಸುತ್ತಿದ್ದು, ಇದು ಕಾಗೋಡು ತಿಮ್ಮಪ್ಪ ಮತ್ತು ಗೋಪಾಲಕೃಷ್ಣ ಬೇಳೂರು ಶಾಸಕರಾಗಿದ್ದಾಗ ಮಂಜೂರಾಗಿದೆ. ಆರು ಅಂಗಡಿ ಮಂಜೂರಾಗಿದ್ದು ಮಾವನ ಅಳಿಯ ಶಾಸಕರಾಗಿದ್ದಾಗ, ಅದನ್ನು ಮುಚ್ಚಿಟ್ಟು ನನ್ನ ವಿರುದ್ದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಗಣೇಶ್ ಪ್ರಸಾದ್ ಇನ್ನಿತರರು ಮಾತನಾಡಿದರು. ಪ್ರತಿಭಟನೆಯಲ್ಲಿ ವಿ.ಮಹೇಶ್, ಅರವಿಂದ ರಾಯ್ಕರ್, ಮೈತ್ರಿ ಪಾಟೀಲ್, ಪ್ರೇಮ ಸಿಂಗ್, ಅರುಣ್ ಕುಗ್ವೆ, ಸತೀಶ್ ಬಾಬು, ದೇವೇಂದ್ರಪ್ಪ, ಆರ್. ಶ್ರೀನಿವಾಸ್, ಕೊಟ್ರಪ್ಪ ನೇದರವಳ್ಳಿ, ಮಂಜುನಾಥ ಆಚಾರ್, ರಮೇಶ್ ಹಾರೆಗೊಪ್ಪ, ಪುರುಷೋತ್ತಮ್, ಸಂತೋಷ್ ಶೇಟ್, ಸತೀಶ್ ಕೆ., ಗಿರೀಶ್ ಗೌಡ, ಕಲಸೆ ಚಂದ್ರಪ್ಪ, ನಾಗರಾಜ ಪೈ, ಭಾಷಾ ಸಾಬ್, ಯು.ಎಚ್.ರಾಮಪ್ಪ ಇನ್ನಿತರರು ಹಾಜರಿದ್ದರು. ಇದಕ್ಕೂ ಮೊದಲು ಗಣಪತಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.