ಶಿವಮೊಗ್ಗ: ಎರಡು ಪ್ರತ್ಯೇಖ ಪ್ರಕರಣಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದ ಯುವಕರಿಬ್ಬರು ಅದೇ ಹೋರಿಗಳಿಗೆ ಬಲಿಯಾಗಿದ್ದಾರೆ. ಶಿರಾಳಕೊಪ್ಪ ಬಳಿಯ ಮಳ್ಳೂರು ಮತ್ತು ಶಿವಮೊಗ್ಗ ಗ್ರಾಮಾಂತರದ ಕೊನಗವಳ್ಳಿಯಲ್ಲಿ ಭಾನುವಾರ ಸಂಕ್ರಾಂತಿಯಂದು ನಡೆದ ಈ ಸ್ಪರ್ಧೆಯನ್ನು ನೋಡ ಹೋದವರು ಹೋರಿಯ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಶಿರಾಳಕೊಪ್ಪದ ಸಮೀಪದ ಮಳ್ಳೂರು ಹೋರಿ ಹಬ್ಬದಲ್ಲಿ ರಂಗನಾಥ್ (24 ) ತೀವ್ರವಾಗಿ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಘಟನೆ ನಡೆದ ತಕ್ಷಣ ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೋರಿ ಈತನ ಹೊಟ್ಟೆಗೆ ತಿವಿದಿದ್ದರಿಂದ ಗಂಭೀರ ಸ್ಥಿತಿಯಲಿದ್ದುದನ್ನು ಗಮನಿಸಿದ ವೈದ್ಯರು ಹೊಟ್ಟೆಗೆ ಹೊಲಿಗೆ ಹಾಕಿ ನಂತರ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಆದರೆ ಮೆಗ್ಗಾನ್‌ನಲ್ಲಿ ಚಿಕಿತ್ಸೆ ಫಲಿಸದೆ ಬೆಳಗ್ಗಿನ ಜಾವ ಯುವಕ ಸಾವನ್ನಪ್ಪಿದ್ದಾನೆ.
ಇನ್ನೊಂದು ಪ್ರಕರಣದಲ್ಲಿ, ಶಿವಮೊಗ್ಗ ಗ್ರಾಮಾಂತರದ ಕೊನಗನವಳ್ಳಿಯಲ್ಲಿ ನಡೆದ ಹೋರಿಬೆದರಿಸುವ ಸ್ಪರ್ಧೆಯಲ್ಲಿ ಲೋಕೇಶ್ (32 ) ಎಂಬ ಯುವಕ ಸಾವನ್ನಪ್ಪಿದ್ದಾನೆ. ಈತನ ಎದೆಗೆ ಹೋರಿ ತಿವಿದಿತ್ತು. ಶಿವಮೊಗ್ಗ ನಗರದ ಆಲ್ಕೊಳ ಬಡಾವಣೆಯ ವಾಸಿಯಾದ ಈತ, ಹೋರಿ ಬೆದರಿಸುವ ಸ್ಪರ್ಧೆ ನೋಡಲು ಬೈಕಿನಲ್ಲಿ ಹೋಗಿದ್ದನು. ಈ ಘಟನೆಯಲ್ಲಿ ಇತರೆ 6 ಜನರಿಗೆ ಗಾಯಗಳಾಗಿವೆ.
ಕೊನಗನಹಳ್ಳಿ ಗ್ರಾಮದಲ್ಲಿ ಹೋರಿ ಓಡುವ ವೇಳೆ ನಿಂತಿದ್ದ ಲೋಕೇಶ್ ಮೇಲೆಯೇ ಹೋರಿ ಹಾರಿ ತಿವಿದಿದೆ. ಊರಿನ ಜನ ಇದನ್ನು ಗಮನಿಸಿ ಕೂಡಲೇ ಬೈಕ್ ಮೇಲೆ ಆತನನ್ನು ಮೆಗ್ಗಾನ್‌ಗೆ ಕರೆತಂದರೂ ಅಷ್ಟರಲ್ಲೇ ಇಹಲೋಕ ತ್ಯಜಿಸಿದ್ದನು. . ಮೃತ ಲೋಕೇಶ್ ರೈತಾಪಿ ವರ್ಗದವರಾಗಿದ್ದು, ಮೂರು ಮಕ್ಕಳಿದ್ದಾರೆ.
ಕೊನಗವಳ್ಳಿಯ ಹೋರಿ ಹಬ್ವದ ಆಯೋಜಕರ ವಿರುದ್ಧ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿದ್ದಾರೆ.