ಶಿವಮೊಗ್ಗ : ಸಾಲದ ಕಂತು ಕಟ್ಟದೆ ಹಣಕಾಸು ಸಂಸ್ಥೆಗೆ ವಂಚಿಸಲು ಕಾರು ಕಳುವಾಗಿದೆ ಎಂದು ನಾಟಕವಾಡಿದ್ದ ಕಾರು ಮಾಲೀಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಈ ಸಂಬಂಧ ತುಂಗಾನಗರ ಠಾಣೆ ಪೊಲೀಸರು ಶುಕ್ರವಾರ ಕಾರು ಮಾಲೀಕ ಸೇರಿ ಇಬ್ಬರನ್ನು ಬಂಧಿಸಿ ಕಾರು ಜಪ್ತಿ ಮಾಡಿದ್ದಾರೆ.
ವಿದ್ಯಾನಗರದ ಚಂದ್ರಕುಮಾರ್ (28) ಮತ್ತು ದಾವಣಗೆರೆ ಸರಸ್ವತಿನಗರದ ಜಿ.ಪ್ರಶಾಂತ್ (29) ಬಂಧಿತರು.
2022ರ ಮೇ 6ರಂದು ಸೂಳೆಬೈಲು ಸಮೀಪದ ಕುಂಚಿಟಿಗರ ಬೀದಿಯಲ್ಲಿರುವ ಹಳೇ ಮನೆ ಬಳಿ ರಾತ್ರಿ ಟೊಯೋಟಾ ಯಾರಿಸ್ ಕಾರು ಕಳ್ಳತನವಾಗಿದೆ ಎಂದು ಮಾಲೀಕ ಚಂದ್ರುಕುಮಾರ್ ತುಂಗಾನಗರ ಠಾಣೆಗೆ ದೂರು ನೀಡಿದ್ದರು. ಲೋನ್ ಕಟ್ಟದೆ ಫೈನಾನ್ಸ್ ಸಂಸ್ಥೆಗೆ ವಂಚಿಸಲು ಮತ್ತು ಇನ್ಸೂರೆನ್ಸ್‌ಗಾಗಿ ಕಾರಿನ ನಂಬರ್ ಬದಲಾಯಿಸಿ ಸ್ನೇಹಿತ ಪ್ರಶಾಂತ್‌ಗೆ ಕೊಟ್ಟಿದ್ದ. ಆನಂತರ ಕಳ್ಳತನ ಆಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಚಂದ್ರಕುಮಾರ್ ಮತ್ತು ಪ್ರಶಾಂತ್ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಕಂಪನಿಯಲ್ಲಿ ಪ್ರಶಾಂತ್ ಸೇಲ್ಸ್‌ಮನ್ ಆಗಿದ್ದರು. ಇಬ್ಬರು ಸೇರಿ ಸಂಚು ರೂಪಿಸಿ ಕಾರಿನ ನಂಬರ್ ಪ್ಲೇಟ್ ಬದಲಿಸಿದ್ದರು ಎನ್ನಲಾಗಿದೆ.
ತುಂಗಾನಗರ ಇನ್‌ಸ್ಪೆಕ್ಟರ್ ಬಿ.ಮಂಜುನಾಥ್, ಪಿಎಸ್‌ಐ ದೂದ್ಯಾನಾಯ್, ಎಎಸ್‌ಐ ಮನೋಹರ್, ಸಿಬ್ಬಂದಿ ಕಿರಣ್ ಮೋರೆ, ಅರುಣ್‌ಕುಮಾರ್, ಮೋಹನ್‌ಕುಮಾರ್, ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಹರಿಹಂತ ಶಿರಹಟ್ಟಿ ಕಾರ್ಯಾಚರಣೆ ನಡೆಸಿ ಶುಕ್ರವಾರ ಕಾರು ಮಾಲೀಕ ಮತ್ತು ಆತನ ಸ್ನೇಹಿತನನ್ನು ಬಂಧಿಸಿದ್ದಾರೆ. ಬಂಧಿತರಿಂದ 10 ಲಕ್ಷ ರೂ. ಮೌಲ್ಯದ ಕಾರು, ನಕಲಿ ನಂಬರ್ ಪ್ಲೇಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.